ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತಮಗೆ ಜೈಲಿನಲ್ಲಿ ಎದುರಾಗಿರುವ ಸಾಲು ಸಾಲು ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಸಹ ಕೈದಿಗಳ ಕಿರುಕುಳದಿಂದ ಹಿಡಿದು ವೃತ್ತಿಜೀವನದ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಸಹ ಕೈದಿಗಳಿಂದ ನಿಂದನೆ
ಜೈಲಿನಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದರ್ಶನ್ ಆರೋಪಿಸಿದ್ದಾರೆ. ಸಹ ಕೈದಿಗಳು ಪದೇ ಪದೇ ನಿಂದಿಸುವುದು, ಮೂದಲಿಸುವುದು ಮತ್ತು ಪ್ರಚೋದನೆ ನೀಡುವುದರಿಂದ ತಮಗೆ ತೀವ್ರ ಮಾನಸಿಕ ಹಿಂಸೆಯಾಗುತ್ತಿದೆ. ಜೊತೆಗೆ ನಿಯಮಗಳನ್ನು ಗಾಳಿಗೆ ತೂರಿ ತಮ್ಮನ್ನು ಕ್ವಾರಂಟೈನ್ ಸೆಲ್ ನಲ್ಲಿ ಇರಿಸಲಾಗಿದ್ದು, ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ತಾರತಮ್ಯದ ಆರೋಪ ಮತ್ತು ಆರೋಗ್ಯದ ಸಮಸ್ಯೆ
ಇತರ ಕೈದಿಗಳಿಗೆ ಹೋಲಿಸಿದರೆ ಜೈಲಿನಲ್ಲಿ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ದರ್ಶನ್ ದೂರಿದ್ದಾರೆ. ಕುಟುಂಬದವರನ್ನು ಭೇಟಿ ಮಾಡಲು ಸರಿಯಾದ ಸಮಯ ನೀಡುತ್ತಿಲ್ಲ. ಮನೆ ಊಟ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲು ಅವಕಾಶ ನಿರಾಕರಿಸಲಾಗುತ್ತಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೂ ಸರಿಯಾದ ಫಿಸಿಯೋಥೆರಪಿ ಚಿಕಿತ್ಸೆ ಸಿಗುತ್ತಿಲ್ಲ. ಕೇವಲ ಎರಡು ಮೂರು ಬಾರಿ ಮಾತ್ರ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಸಿನಿಮಾ ವೃತ್ತಿಜೀವನಕ್ಕೆ ಮರಣಗಂಟೆ
ಸುದೀರ್ಘ ಜೈಲುವಾಸವು ನನ್ನ ವೃತ್ತಿಜೀವನವನ್ನೇ ಅಂತ್ಯಗೊಳಿಸಬಹುದು ಎಂದು ದರ್ಶನ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಎರಡು ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದ ನನಗೆ ಈಗ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಮೂರು ದೊಡ್ಡ ಸಿನಿಮಾಗಳಿಗೆ ಸಹಿ ಮಾಡಿದ್ದು, ನಿರ್ಮಾಪಕರು ಸುಮಾರು ಆರು ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಜೈಲಿನಲ್ಲಿ ಇರುವುದರಿಂದ ಈ ಚಿತ್ರಗಳು ಅರ್ಧಕ್ಕೆ ನಿಂತುಹೋಗಿದ್ದು, ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಇದು ನನ್ನ ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗಿದೆ ಎಂದು ಅವರು ವಾದಿಸಿದ್ದಾರೆ.
ವಿಳಂಬವಾಗುತ್ತಿರುವ ನ್ಯಾಯಾಂಗ ಪ್ರಕ್ರಿಯೆ
ಈ ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಆದರೆ ಕಳೆದ ಎಂಟು ತಿಂಗಳಿನಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಮುಗಿದಿದೆ. ಉಳಿದ ಸಾಕ್ಷಿಗಳ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಲಕ್ಷಣಗಳಿಲ್ಲ. ಹೀಗಾಗಿ ಸುದೀರ್ಘ ಕಾಲ ಜೈಲಿನಲ್ಲಿಡುವುದು ಸರಿಯಲ್ಲ ಎಂದು ದರ್ಶನ್ ಜಾಮೀನು ಕೋರಿದ್ದಾರೆ.
ಈಗಾಗಲೇ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದೀಗ ದರ್ಶನ್ ಸಲ್ಲಿಸಿರುವ ಹೊಸ ಮನವಿಯ ವಿಚಾರಣೆಯು ಇಂದು ನಡೆಯಲಿದ್ದು, ಸ್ಯಾಂಡಲ್ ವುಡ್ ನಟನಿಗೆ ಸುಪ್ರೀಂ ಕೋರ್ಟ್ ನಲ್ಲಿ ರಿಲೀಫ್ ಸಿಗಲಿದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.








