PSI ಅಕ್ರಮ ನೇಮಕಾತಿ ಪ್ರಕರಣ | ಮತ್ತೊಬ್ಬ ಕಾನ್ಸ್ಟೇಬಲ್ನ ಬಂಧನ
ಕಲಬುರಗಿ: PSI ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಕಾನ್ಸ್ಟೇಬಲ್ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಪೊಲೀಸರು ಮೋಸದ ಜಾಲದಲ್ಲಿ ಸಿಲುಕಿಕೊಂಡಂತಾಗಿದೆ. ಅಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನ 7 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಹಾಗೇ ಬುಧವಾರ ಸಂಜೆ ಸಿಐಡಿ ಅಧಿಕಾರಿಗಳು ಎಸ್ಪಿ ರಾಘವೇಂದ್ರ ಸಮ್ಮುಖದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗುರ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ನಿನ್ನೆ ಸಾಯಂಕಾಲ 7 ಗಂಟೆಯಿಂದ 11 ಗಂಟೆವರೆಗೆ ವಿಚಾರಣೆ ಮಾಡಿದ್ದಾರೆ. ಇವರು ಈ ಹಿಂದೆ ಆಳಂದ ಉಪ ವಿಭಾಗದಲ್ಲಿ ಡಿಎಸ್ಪಿಯಾಗಿ ಕೆಲಸ ಮಾಡಿದ್ದರು. ಇವರು ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್‌ಪಿನ್ ಆಗಿರುವ ಆರ್.ಡಿ.ಪಾಟೀಲ್ ಆಪ್ತರು ಎನ್ನಲಾಗುತ್ತಿದೆ.
ಇನ್ನೂ ಪ್ರಕರಣ ಪ್ರಮುಖ ಆರೋಪಿಗಳಾದ ಆರ್.ಡಿ.ಪಾಟೀಲ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಸೇರಿದಂತೆ ಇತರರನ್ನು ಸಿಐಡಿ ಅಧಿಕಾರಿಗಳು ಬುಧವಾರ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿಕೊಂಡಿದ್ದಾರೆ.
ಅಲ್ಲದೇ ಮಂಗಳವಾರ ಬಂಧಿತರಾಗಿರುವ ಆರ್.ಡಿ.ಪಾಟೀಲ್ ಆಪ್ತರಾಗಿರುವ ಆಡಿಟರ್ ಚಂದ್ರಕಾಂತ ಕುಲಕರ್ಣಿ, ಪಿಎಸ್‌ಐ ಆಗಿ ನೇಮಕಗೊಂಡಿದ್ದ ಪ್ರಭು ಹಾಗೂ ಆತನ ತಂದೆ ಶರಣಪ್ಪ ರಾಜಾಪುರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಐಡಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಟ್ರೈನಿ ಪಿಎಸ್‌ಐ ಯಶವಂತಗೌಡ ಎಂಬುವರನ್ನು ಮಂಗಳವಾರ ರಾತ್ರಿ ವಶಕ್ಕೆ ತೆಗೆದುಕೊಂಡು ಸಿಐಡಿ ತಂಡ ಬೆಂಗಳೂರಿಗೆ ಕರೆದುಕೊಂಡು ಬಂದಿದೆ.