ಇಂದು ನಡೆದ ಪುಲ್ವಾಮಾ ಎನ್ ಕೌಂಟರ್ ನಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದು ಒಬ್ಬ ಭಯೋತ್ಪಾದಕ ಹತ್ಯೆಯಾಗಿದ್ದಾನೆ. ಮತ್ತೋರ್ವ ಭಾರತೀಯ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶ್ರೀನಗರ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಲ್ವಾಮಾ, ಅಗಸ್ಟ್ 12: ಇಂದು (ಆಗಸ್ಟ್ 12) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಮುಖಾಮುಖಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದು, ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.

ಪುಲ್ವಾಮದ ಕಮ್ರಾಜಿಪೋರಾ ಎಂಬ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು, 53 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಹತ್ಯೆಗೀಡಾದ ಭಯೋತ್ಪಾದಕನನ್ನು ಪುಲ್ವಾಮಾದ ಆಜಾದ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. ಅವನು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದನು. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಅನೂಪ್ ಸಿಂಗ್ ಅವರನ್ನು ಮೇ 22, 2020 ರಂದು ಕೊಲ್ಲುವುದು ಸೇರಿದಂತೆ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ.

ಪುಲ್ವಾಮಾದ ಕಮ್ರಾಜಿಪೊರಾದಲ್ಲಿ ನಡೆದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕರು ಏಕಾಏಕಿ ಭದ್ರತಾ ಪಡೆಗಳ ಗುಂಡಿನ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಕೂಡಲೇ ಎನ್ಕೌಂಟರ್ ನಡೆಸಲು ಆರಂಭಿಸಿದ ಭದ್ರತಾ ಪಡೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಶ್ರೀನಗರದ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.








