ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 2 ತಿಂಗಳು : ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ 2 ತಿಂಗಳು ಕಳೆದಿದೆ.. ಇದೇ ಹಿನ್ನೆಲೆ ಇಂದು ಅಪ್ಪು ಅವರ ಸಮಾಧಿಗೆ ಕುಟುಂಬಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಿದರು..
ಪೂಜಾ ಕಾರ್ಯದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅವರ ಮಕ್ಕಳು, ರಾಘವೇಂದ್ರ ರಾಜ್ ಕುಮಾರ್ , ಯುವರಾಜ್ ರಾಘವೇಂದ್ರ , ಶಿವರಾಜ್ ಕುಮಾರ್, ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.
ಅಶ್ವಿನಿ ಮತ್ತು ಮಕ್ಕಳು ಸಮಾಧಿಗೆ ಪೂಜೆ ಸಲ್ಲಿಸಿದ್ದು, ಅಪ್ಪು ಸಮಾಧಿಯನ್ನು ನೋಡುತ್ತ ಭಾವುಕರಾದರು. ಸಾವಿರಾರು ಅಭಿಮಾನಿಗಳು ಕೂಡ ಅಪ್ಪು ಸಮಾಧಿ ಬಳಿ ಆಗಮಿಸಿದ್ದರು..
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ಅವರು , ವೈದ್ಯೋ ನಾರಾಯಣ ಹರಿ ಅಂತ ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ಇವತ್ತು ನನ್ನ ತಮ್ಮ ಹೋಗಿ 2 ತಿಂಗಳಾಗಿದೆ. ಆದರೆ ಅವನ ಕಣ್ಣುಗಳು ಎಲ್ಲರನ್ನೂ ನೋಡುತ್ತಿದೆ. ಅದೇ ಅವನ ಶಕ್ತಿ. ನಮ್ಮ ತಂದೆ ಬೇಡರ ಕಣ್ಣಪ್ಪನಾಗಿ ಕಣ್ಣುದಾನ ಮಾಡಿದರು. ಕಣ್ಣುದಾನ ಮಾಡಿ ಎಂದು ಸಂದೇಶ ಕೊಟ್ಟು ಹೋದರು..
ನಾವು ದೇಹದಾನ ಮಾಡಿದ್ದೀವಿ. ನನಗೂ ಶಿವಣ್ಣನಿಗೂ ಅಪ್ಪಾಜಿಯೇ ಪ್ರೇರಣೆ. ಅಪ್ಪು ಅಗಲಿ ಇಂದಿಗೆ ಎರಡು ತಿಂಗಳು ಆಗಿದೆ. ಇವತ್ತು ಮನೆಯವರೆಲ್ಲ ಪೂಜೆ ಮಾಡಿದ್ದೇವೆ. ಅಪ್ಪು ಇಷ್ಟ ಪಡುತ್ತಿದ್ದ ತಿಂಡಿ, ವಸ್ತುಗಳನ್ನು ಇಟ್ಟು ಪೂಜೆ ಮಾಡಿದ್ದೇವೆ. ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ ಅವನ ಸಮಾಜ ಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ ಎಂದು ಪುನೀತ್ ರನ್ನ ನೆನೆದರು..
ಅಲ್ಲದೇ ಅಪ್ಪು ಪ್ರೇರಣೆಯಿಂದ 400ಕ್ಕೂ ಹೆಚ್ಚು ಜನ ಕಣ್ಣು ದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಅಪ್ಪು ಹೋಗಿ ಬದಲಾವಣೆ ತಂದಿದ್ದಾನೆ. ಇದು ನಮಗೆ ಹೆಮ್ಮೆ. ದೇಶದಲ್ಲಿ ಇಷ್ಟು ಮಂದಿ ದೇಹ ಮತ್ತು ಕಣ್ಣನ್ನು ದಾನ ಮಾಡಿರುವುದು ಇದೇ ಮೊದಲು. ಎಲ್ಲಿಂದ ಕಣ್ಣು ಬಂತು ಎಂದು ಕೇಳಿದರೆ ಕರ್ನಾಟಕದಿಂದ ಎನ್ನುವಂತಾಗಬೇಕು. ಅದೇ ನೀವು ಅಪ್ಪಾಜಿ ಹಾಗೂ ಅಪ್ಪುಗೆ ಸಲ್ಲುಸುವ ಗೌರವ ಎಂದದು ಪ್ರೇರೇಪಿಸಿದರು..