ಡಾ. ಗುರುಪ್ರೀತ್ ಕೌರ್ ಜೊತೆ ಸಪ್ತಪದಿ ತುಳಿದ ಪಂಜಾಬ್ CM ಭಗವಂತ್ ಮಾನ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಡಾ. ಗುರುಪ್ರೀತ್ ಕೌರ್ ಅವರನ್ನ ಕೈ ಹಿಡಿದಿದ್ದಾರೆ. ಮುಖ್ಯಮಂತ್ರಿ ನಿವಾಸದಲ್ಲಿ ಸಿಖ್ ಸಂಪ್ರದಾಯದಂತೆ ಈ ಮದುವೆ ನಡೆದಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ವಿವಾಹದಲ್ಲಿ ಉಪಸ್ಥಿತರಿದ್ದರು.
ವಿಶೇಷವೆಂದರೆ ಮದುವೆಯಲ್ಲಿ ತಂದೆಯಿಂದ ನಡೆಸಬೇಕಿದ್ದ ಕಾರ್ಯಗಳನ್ನ ಕೇಜ್ರಿವಾಲ್ ಮತ್ತು ರಾಘವ್ ಚಡ್ಡಾ ನೆರವೇರಿಸಿದರು. ಭಗವಂತ್ ಮಾನ್ ಅವರ ತಾಯಿ ಹರ್ಪಾಲ್ ಕೌರ್ ಮತ್ತು ಸಹೋದರಿ ಮನ್ಪ್ರೀತ್ ಕೌರ್ ಭಗವಂತ್ ಮಾನ್ ಗಾಗಿ ವಧು ವನ್ನ ಹುಡುಕಿದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗುವ ಮೊದಲು, ಭಗವಂತ್ ಮಾನ್ ಸಂಗ್ರೂರ್ ನಿಂದ ಎರಡು ಬಾರಿ ಸಂಸದರಾಗಿದ್ದರು.
ಭಗವಂತ್ ಮಾನ್ ಮತ್ತು ಗುರುಪ್ರೀತ್ ಕೌರ್ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರಾಗಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಇಬ್ಬರು ಭೇಟಿಯಾಗಿದ್ದರು. ಭಗವಂತ್ ಅವರಿಗೆ ಇದು ಎರಡನೇ ಮದುವೆ. 2015ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಭಗವಂತ್ ಮಾನ್ ಅವರಿಗೆ ಮೊದಲ ಮದುವೆಯಿಂದ ದಿಲ್ಶನ್ (17) ಮತ್ತು ಸೀರತ್ (21) ಎಂಬ ಇಬ್ಬರು ಮಕ್ಕಳಿದ್ದಾರೆ ಮತ್ತು ಅವರ ತಾಯಿಯೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರೇ ಮದುವೆಯ ಆಯೋಜನೆಯ ವೆಚ್ಚವನ್ನು ಭರಿಸಿದ್ದಾರೆ. ಮದುವೆಯಲ್ಲಿ ಭಗವಂತ್ ಸಿಲ್ಕ್ ಗೋಲ್ಡನ್ ಕಲರ್ ಕುರ್ತಾ-ಪೈಜಾಮ ಧರಿಸಿದ್ದರು. ಮತ್ತೊಂದೆಡೆ, ಗುರುಪ್ರೀತ್ ಕೆಂಪು ಬಣ್ಣದ ಭಾರೀ ಕಸೂತಿ ಲೆಹೆಂಗಾವನ್ನು ಧರಿಸಿದ್ದರು. ಸಿಎಂ ನಿವಾಸದಲ್ಲಿಯೇ ಎಲ್ಲ ವಿವಾಹ ಕಾರ್ಯಗಳು ನಡೆದಿವೆ. ಮದುವೆಯಲ್ಲಿ ಅತ್ಯಂತ ಆತ್ಮೀಯರು ಭಾಗವಹಿಸಿದ್ದರು.