Punjab : ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಿದ CM ಚರಂಜಿತ್ ಸಿಂಗ್ ಚನ್ನಿ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಶುಕ್ರವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಚಂಢೀಘಡದಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಚನ್ನಿ ನೇತೃತ್ವದ ಕ್ಯಾಬಿನೆಟ್ ಅಸೆಂಬ್ಲಿಯನ್ನು ವಿಸರ್ಜಿಸಲು ಶಿಫಾರಸು ಮಾಡಿತು, ಆಮ್ ಆದ್ಮಿ ಪಕ್ಷ (ಎಎಪಿ) ಪಕ್ಷಕ್ಕೆ ಹೊಸ ಕ್ಯಾಬಿನೆಟ್ ರಚನೆಗೆ ದಾರಿ ಮಾಡಿಕೊಟ್ಟಿತು.
117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಎಎಪಿ 92 ಸ್ಥಾನಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿತು, ಕಾಂಗ್ರೆಸ್ ಕೇವಲ 18 ಸ್ಥಾನಕ್ಕೆ ಕುಸಿದಿದೆ. ಶಿರೋಮಣಿ ಅಕಾಲಿದಳ ಮೂರು ಸ್ಥಾನಗಳನ್ನು ಪಡೆದರೆ, ಬಿಜೆಪಿ ಎರಡು ಮತ್ತು ಬಿಎಸ್‌ಪಿ ಕೇವಲ ಒಂದು ಸ್ಥಾನ ಪಡೆದಿವೆ.
ಚನ್ನಿ, ಪ್ರಕಾಶ್ ಸಿಂಗ್ ಬಾದಲ್, ಸುಖಬೀರ್ ಸಿಂಗ್ ಬಾದಲ್, ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಅವರಂತಹ ಹಲವಾರು ದಿಗ್ಗಜರು ಸೋತಿದ್ದಾರೆ. ಚನ್ನಿ ಅವರು ಸ್ಪರ್ಧಿಸಿದ್ದ ಎರಡೂ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಸಚಿವ ಸಂಪುಟ ಸಭೆ ಕರೆದ ಬಳಿಕ 15ನೇ ವಿಧಾನಸಭೆ ವಿಸರ್ಜನೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇವೆ ಎಂದು ಚನ್ನಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ. ನಾವು ಅವರ ಸೇವೆಯನ್ನು ಮುಂದುವರಿಸುತ್ತೇವೆ” ಎಂದು ಚುನಾವಣಾ ಫಲಿತಾಂಶದ ಒಂದು ದಿನದ ನಂತರ ರಾಜೀನಾಮೆ ನೀಡಲು ರಾಜಭವನಕ್ಕೆ ಹೋದ ಸಮಯದಲ್ಲಿ ಚನ್ನಿ ತಿಳಿಸಿದರು.








