ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಲಂಡನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದೇಶಭ್ರಷ್ಟ ನೀರವ್ ಮೋದಿ
ಲಂಡನ್: ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿಗಳನ್ನ ವಂಚಿಸಿ ವಿದೇಶಕ್ಕೆ ಹೋಗಿ ಕೂತಿರುವ ವಜ್ರ ವ್ಯಾಪಾರಿ ನೀರವ್ ಮೋದಿಯನ್ನ ಇತ್ತೀಚೆಗೆ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಬ್ರಿಟನ್ ನ ಗೃಹ ಇಲಾಖೆಯು ಆದೇಶ ಹೊರಡಿಸಿತ್ತು. ಇದನ್ನ ಪ್ರಶ್ನಿಸಿ ನೀರವ್ ಮೋದಿ ಲಂಡನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನೀರವ್ ಮೋದಿ ಅರ್ಜಿ ಸಲ್ಲಿಸಿರುವುದನ್ನು ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ ಖಚಿತಪಡಿಸಿದ್ದು, ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರು ತಮ್ಮ ನಿರ್ಧಾರ ಪ್ರಕಟಿಸಬೇಕಿದೆ ಎಂದು ತಿಳಿಸಿದೆ.
ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ನ ಗೃಹ ಇಲಾಖೆಯ ಕಾರ್ಯದರ್ಶಿ ಪ್ರೀತಿ ಪಟೆಲ್ ಕಳೆದ ತಿಂಗಳು ಆದೇಶಿಸಿದ್ದಾರೆ. ಹಸ್ತಾಂತರ ಕೋರಿ ಭಾರತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಗೋಜಿ, ಪ್ರಕರಣಕ್ಕೆ ಸಂಬಂಧಿಸಿ ನೀರವ್ ಮೋದಿ ಭಾರತದ ಕೋರ್ಟ್‌ಗಳಲ್ಲಿ ವಿಚಾರಣೆ ಎದುರಿಸುವುದು ಅಗತ್ಯ. ಹೀಗಾಗಿ ಅವರನ್ನು ಹಸ್ತಾಂತರಿಸಬೇಕು ಎಂದು ಕಳೆದ ಫೆಬ್ರುವರಿಯಲ್ಲಿ ತೀರ್ಪು ನೀಡಿದ್ದರು.








