ಐಪಿಎಲ್ ನ 65ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸೋಲುಣಿಸಿದೆ. ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಿದ್ದರೂ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆ ಬರುವಂತಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಯಶಸ್ವಿ ಜೈಸ್ವಾಲ್ ಕೇವಲ 4 ರನ್ ಬಾರಿಸಿ ಮೊದಲ ಓವರ್ನಲ್ಲೇ ವಿಕೆಟ್ ಒಪ್ಪಿಸಿದ್ದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 18 ರನ್ ಗಳಿಗೆ ಆಟ ಮುಗಿಸಿದರು. ಜೋಸ್ ಬಟ್ಲರ್ ಬದಲಿಗೆ ಆರಂಭಿಕನಾಗಿ ಸ್ಥಾನ ಪಡೆದ ಟಾಮ್ ಕೊಹ್ಲರ್ (18) ಮೋಡಿ ಮಾಡುವಲ್ಲಿ ವಿಫಲರಾದರು. ರಿಯಾನ್ ಪರಾಗ್ ಹಾಗೂ ರವಿಚಂದ್ರನ್ ಅಶ್ವಿನ್ ಅರ್ಧಶತಕದ ಜೊತೆಯಾಟವಾಡಿದರು. ರಿಯಾನ್ ಪರಾಗ್ 34 ಎಸೆತಗಳಲ್ಲಿ 6 ಫೋರ್ಗಳೊಂದಿಗೆ 48 ರನ್ ಬಾರಿಸಿ ಔಟ್ ಆದರು. ಹೀಗಾಗಿ ರಾಜಸ್ಥಾನ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು.
ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಕೂಡ ಆರಂಭಿಕ ಕುಸಿತ ಕಂಡಿತು. ಮೊದಲ ಓವರ್ ನಲ್ಲಿಯೇ ಪ್ರಭ್ಸಿಮ್ರಾನ್ ಸಿಂಗ್ (4) ಔಟ್ ಆದರು. ರೈಲಿ ರೊಸೊವ್ 13 ಎಸೆತಗಳಲ್ಲಿ 22 ರನ್, ಶಶಾಂಕ್ ಸಿಂಗ್ ಶೂನ್ಯ, ಜಾನಿ ಬೈರ್ಸ್ಟೋವ್ (14) ಚಹಲ್ ಸ್ಪಿನ್ ಮೋಡಿಗೆ ಔಟಾದರು.
ಸ್ಯಾಮ್ ಕರನ್ ಹಾಗೂ ಜಿತೇಶ್ ಶರ್ಮಾ 63 ರನ್ ಗಳ ಜೊತೆಯಾಟ ನೀಡಿದರು. ಈ ಮೂಲಕ ತಂಡವನ್ನು ಆಘಾತದಿಂದ ಪಾರು ಮಾಡಿ ಗೆಲುವಿನ ನಗೆ ಬೀರುವಂತೆ ಮಾಡಿದರು. ಪರಿಣಾಮವಾಗಿ ಗೆಲುವಿನ ದಡ ಸೇರಿತು.
ಜಿತೇಶ್ ಶರ್ಮಾ (22), ಸ್ಯಾಮ್ ಕರನ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಅಜೇಯ 63 ರನ್ ಗಳಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಪಂಜಾಬ್ 10ನೇ ಸ್ಥಾನದಲ್ಲಿತ್ತು. ಪಂಜಾಬ್ ಮೇಲಕ್ಕೇರಿದ್ದು, ಮುಂಬೈ 10ನೇ ಸ್ಥಾನಕ್ಕೆ ಕುಸಿತ ಕಂಡಿದೆ.