ಶುದ್ಧತೆ & ಪಾರದರ್ಶಕತೆ ಸರ್ಕಾರದಲ್ಲಿ ಮಹತ್ವದ್ದಾಗಿದೆ : ಮೋದಿ
ನವದೆಹಲಿ : ಶುದ್ಧತೆ ಮತ್ತು ಪಾರದರ್ಶಕತೆ ಯಾವುದೇ ವ್ಯಕ್ತಿಯ ವ್ಯಕ್ತಿಗತ ಜೀವನದಲ್ಲಾಗಲೀ, ಸರ್ಕಾರದಲ್ಲಾಗಲೀ ಮಹತ್ವದ್ದಾಗಿದೆ. ಇದು ಅತ್ಯಂತ ಮಹತ್ವದ ನೈತಿಕ ಉತ್ತೇಜಕ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಥಮ ಆಡಿಟ್ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಲೆಕ್ಕ ಪರಿಶೋಧನೆಯನ್ನು ಒಂದು ಕಾಲದಲ್ಲಿ ಭಯದಿಂದ, ಆತಂಕದಿಂದ ನೋಡುವ ಕಾಲವಿತ್ತು.
ಈಗ ಆ ಮನೋಸ್ಥಿತಿ ಬದಲಾಗಿದೆ. ಇಂದು ಲೆಕ್ಕಪರಿಶೋಧನೆಯನ್ನು ಮೌಲ್ಯವರ್ಧನೆಯ ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಅಂದರೆ ಸಿಎಜಿ ಒಂದು ಸಂಸ್ಥೆಯಾಗಿ, ಕೇವಲ ದೇಶದ ಖಾತೆಗಳ ಲೆಕ್ಕವನ್ನು ಪರಿಶೋಧಿಸುತ್ತಿಲ್ಲ ಜೊತೆಗೆ ಉತ್ಪಾದಕತೆ, ದಕ್ಷತೆಯಲ್ಲಿ ಮೌಲ್ಯವರ್ಧನೆಯನ್ನೂ ಮಾಡುತ್ತಿದೆ.
ಹೀಗಾಗಿ ಆಡಿಟ್ ದಿನ ಅಥವಾ ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಮ್ಮ ಅಭಿವೃದ್ಧಿಯ ಬಗ್ಗೆ ಚಿಂತನ ಮಂಥನ ನಡೆಸುವ ಕಾರ್ಯಕ್ರಮವಾಗಿದೆ,
ಕೆಲವೇ ಸಂಸ್ಥೆಗಳು ವರ್ಷಗಳು ಉರುಳಿದಂತೆ ಹೆಚ್ಚು ಬಲಿಷ್ಠವಾಗುತ್ತವೆ ಮತ್ತು ಪ್ರಜ್ಞಾವಂತವಾಗುತ್ತವೆ ಮತ್ತು ದೇಶಕ್ಕೆ ಹೆಚ್ಚು ಉಪಯುಕ್ತವಾಗುತ್ತವೆ. ಅಂತಹ ಸಂಸ್ಥೆಗಳಲ್ಲಿ ಸಿಎಜಿ ಸಹ ಒಂದು ಎಂದು ಶ್ಲಾಘಿಸಿದರು.
ಸರ್ಕಾರದ ಕಾರ್ಯಕ್ಷಮತೆಯ ಅವಲೋಕನ ಮಾಡುವಾಗ, ಸಿಎಜಿಗೆ ಹೊರಗಿನ ವ್ಯಕ್ತಿಯಾಗಿ ನೋಡುವ ಅವಕಾಶ ಇರುತ್ತದೆ.
ಸಿಎಜಿ ವರದಿಯ ಆಧಾರದ ಮೇಲೆ ವ್ಯವಸ್ಥಿತ ಸುಧಾರಣೆ ಮಾಡಲಾಗುತ್ತಿದೆ. ಅದನ್ನು ಸರ್ಕಾರ ಒಂದು ಸಹಯೋಗದ ರೂಪದಲ್ಲಿ ನೋಡುತ್ತಿದೆ ಎಂದು ಹೇಳಿದರು.