ಅಲ್ಲು ಅವರನ್ನ ನಾನು ಸೆಟ್ ನಲ್ಲಿ ನೋಡಿಯೇ ಇಲ್ಲ , ‘ಪುಷ್ಪ’ನನ್ನ ಮಾತ್ರ ನೋಡ್ತಿದ್ದೆ : ಡಾಲಿ
ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಪುಷ್ಪ ಹವಾ ಜೋರಿದೆ.. ನಾಳೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಲಿದೆ.. ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ನಟನೆಯ , ಸುಕುಮಾರ್ ನಿರ್ದೇಶನ , ಮೈತ್ರಿ ಮೂವೀಸ್ ನಿರ್ಮಾಣದ ಈ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಸಿನಿಮಾತಂಡ ಭರ್ಜರಿ ಪ್ರಚಾರ ಮಾಡ್ತಿದ್ದು, ಇದರ ಅಂಗವಾಗಿ ಅಲ್ಲು ಅರ್ಜುನ್ , ಡಾಲಿ, ರಶ್ಮಿಕಾ ಅಂಡ್ ಟೀಮ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ರು..
ಬೆಂಗಳೂರಿನಲ್ಲಿ ಪ್ರಚಾರ ಕಾರ್ಯಕ್ರಮವೂ ಅದ್ಧೂರಿಯಾಗಿ ನೆರವೇರಿತು.. ಈ ವೇಳೆ ಡಾಲಿ ಧನಂಜಯ್ ಸಿನಿಮಾದಲ್ಲಿ ತಮ್ಮ ಅನುಭವ ಹಂಚಿಕೊಂಡರು , ನಿರ್ದೇಶಕ ಸುಕುಮಾರ್ , ನಟಿ ರಶ್ಮಿಕಾ ಹಾಗೂ ನಟ ಅಲ್ಲು ಬಗ್ಗೆಯೂ ಮಾತನಾಡಿದ್ರೂ.. ಡಾಲಿ ಧನಂಜಯ್ , ‘ನಿರ್ದೇಶಕ ಸುಕುಮಾರ್ ಅವರು ಕರೆದು ನೀನು ಪುಷ್ಪ ಸಿನಿಮಾದ ಭಾಗವಾಗಬೇಕು ಎಂದು ಹೇಳಿದಾಗ ನನಗೆ ಬಹಳ ಖುಷಿಯಾಯಿತು. ಆರ್ಯ ಸಿನಿಮಾದಿಂದಲೂ ನಾನು ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದೀನಿ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ನಾನೂ ಕಲಿಯುತ್ತಿರುತ್ತೇನೆ. ಹಾಗೆಯೇ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಜೊತೆಗೆ ನಟಿಸಿ ನಾನು ಸಾಕಷ್ಟು ಕಲಿತೆ’ ಎಂದಿದ್ದಾರೆ..
ಅಲ್ಲದೇ ‘ಪುಷ್ಪ ಸಿನಿಮಾದ ಸೆಟ್ ನಲ್ಲಿ ಅಲ್ಲು ಅರ್ಜುನ್ ಅವರನ್ನ ನಾನೂ ನೋಡಿಯೇ ಇಲ್ಲ.. ಅಲ್ಲಿ ಅವರು ನನಗೆ ಸದಾ ಪುಷ್ಪ ಆಗಿಯೇ ಕಾಣುತ್ತಿದ್ದರು. ರಶ್ಮಿಕಾ ಮಂದಣ್ಣ ಸಹ ಯಾವಾಗಲೂ ಶ್ರೀವಲ್ಲಿಯಾಗಿ ಕಾಣಿಸಿದರು. ಅದೊಂದು ಅದ್ಭುತವಾದ ಜಗತ್ತು. ಪುಷ್ಪನ ಜಗತ್ತನ್ನು ಸೃಷ್ಟಿಸಲು ಅವರೆಲ್ಲ ಪಡುತ್ತಿದ್ದ ಕಷ್ಟ ನನಗೆ ಬಹಳ ಖುಷಿ ಕೊಟ್ಟಿತು’ ಎಂದಿದ್ದಾರೆ.
ಅಲ್ಲದೇ ‘ಎಷ್ಟೋ ಸರತಿ ನನಗೇ ಅನ್ನಿಸುತ್ತದೆ ಸಾಕು ಬಿಡಪ್ಪ ಎಷ್ಟು ಶಾಟ್ ಕೊಡುವುದು ಎಂದು. ಆದರೆ ಅಲ್ಲು ಅರ್ಜುನ್ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಪ್ರತಿಯೊಂದು ಶಾಟ್‌ಗೂ ತಮ್ಮ ಪೂರ್ಣ ಪ್ರಮಾಣದ ಶ್ರಮ ಹಾಕುತ್ತಿದ್ದುದು ಅದ್ಭುತ. ಅವರನ್ನು ಈಗಾಗಲೇ ಸ್ಟಾರ್ ನಟನಾಗಿ ಜನ ಸ್ವೀಕರಿಸಿ ಆಗಿದೆ. ಅವರು ಹೇಗೆ ಮಾಡಿದರೂ ಜನ ಒಪ್ಪುತ್ತಾರೆ. ಆದರೂ ಅವರು ತಮ್ಮ ಪೂರ್ಣ ಶ್ರಮವನ್ನು ಸಿನಿಮಾಕ್ಕಾಗಿ ಹಾಕುತ್ತಿದ್ದರು. ಅವರ ಎನರ್ಜಿ ಅದ್ಭುತ’ ಎಂದು ಅಲ್ಲು ಅರ್ಜುನ್ ಅವರನ್ನ ಕೊಂಡಾಡಿದ್ದಾರೆ ಡಾಲಿ.
ಇದೇ ವೇಳೆ ಅಲ್ಲು ಅರ್ಜುನ್ ಗೆ ‘ಐಕಾನ್ ಸ್ಟಾರ್’ ಎಂದು ಬಿರುದು ಕೊಟ್ಟಿರುವುದು ಸರಿಯಾಗಿಯೇ ಇದೆ. ಅವರ ಶ್ರಮಕ್ಕೆ, ಅವರ ತೊಡಗಿಸಿಕೊಳ್ಳುವಿಕೆಗೆ, ಏಕಾಗ್ರತೆಗೆ ಅವರು ಎಲ್ಲರಿಗೂ ಐಕಾನ್ ಎಂದಿದ್ದಾರೆ. ಬಳಿಕ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಡಾಲಿ, ಸಿನಿಮಾದಲ್ಲಿ ನಾನು ಜಾಲಿ ರೆಡ್ಡಿ ಹೆಸರಿನ ಪಾತ್ರದಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ನಟಿಸಿದ್ದನ್ನು, ಸೆಟ್‌ನಲ್ಲಿ ಇದ್ದಷ್ಟು ದಿನ ಎಲ್ಲವನ್ನೂ ಬಹಳ ಚೆನ್ನಾಗಿ ಎಂಜಾಯ್ ಮಾಡಿದ್ದೇನೆ. ಎಲ್ಲರೂ ಸಿನಿಮಾ ನೋಡುತ್ತಾರೆ, ದೇಶದಲ್ಲಿಯೇ ಈ ಸಿನಿಮಾ ಒಳ್ಳೆಯ ಹಿಟ್ ಆಗುತ್ತದೆಂಬ ನಿರೀಕ್ಷೆ ಇದೆ ಎಂದಿದ್ದಾರೆ..