ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಾರ್ವೆ ಪ್ರವಾಸವು ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯ ಮಾಧ್ಯಮಗಳ ಹಳೆಯ ಚಾಳಿ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ನಾರ್ವೆ ಪತ್ರಕರ್ತೆಯೊಬ್ಬರು ಭಾರತದ ಆಂತರಿಕ ವಿಷಯಗಳ ಕುರಿತು ಪ್ರಧಾನಿಗಳನ್ನು ಪ್ರಶ್ನಿಸಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಈಗ ಅಲ್ಲಿನ ಪ್ರತಿಷ್ಠಿತ ದಿನಪತ್ರಿಕೆಯೊಂದು ಪ್ರಧಾನಿ ಮೋದಿಯವರನ್ನು ಹಾವಾಡಿಗನಂತೆ ಚಿತ್ರಿಸಿ ಜನಾಂಗೀಯ ದ್ವೇಷ ಮೆರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆಫ್ಟೆನ್‌ಪೋಸ್ಟನ್ ಎಂಬ ಹೆಸರಾಂತ ನಾರ್ವೇಜಿಯನ್ ಪತ್ರಿಕೆಯು ಈ ವಿವಾದಾತ್ಮಕ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ನೆಲದ ಮೇಲೆ ಕುಳಿತು ಹಾವಿನ ಬುಟ್ಟಿಯ ಮುಂದೆ ಕೊಳಲು ಊದುತ್ತಿರುವಂತೆ ತೋರಿಸಲಾಗಿದೆ. ವಿಶೇಷವೆಂದರೆ ಆ ಬುಟ್ಟಿಯಿಂದ ಹೊರಬರುತ್ತಿರುವುದು ಹಾವಲ್ಲ, ಬದಲಾಗಿ ಇಂಧನ ತುಂಬಿಸುವ ಪೈಪ್ ರೀತಿಯ ವಸ್ತು. ಈ ಚಿತ್ರಕ್ಕೆ ಪೂರಕವಾಗಿ ಒಬ್ಬ ನಿಗೂಢ ಮತ್ತು ಕಿರಿಕಿರಿ ಉಂಟುಮಾಡುವ ಮನುಷ್ಯ ಎನ್ನುವ ಅವಹೇಳನಕಾರಿ ಶೀರ್ಷಿಕೆಯನ್ನು ನೀಡುವ ಮೂಲಕ ಭಾರತದ ಪ್ರಧಾನಿಯನ್ನು ಹಿಯಾಳಿಸಲಾಗಿದೆ.
ಈ ವ್ಯಂಗ್ಯಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಭಾರತೀಯರು ಸೇರಿದಂತೆ ಜಾಗತಿಕ ಮಟ್ಟದ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಇದು ಕೇವಲ ಒಂದು ಕಾರ್ಟೂನ್ ಅಲ್ಲ, ಬದಲಾಗಿ ಪಾಶ್ಚಿಮಾತ್ಯರ ವಸಾಹತುಶಾಹಿ ಅಹಂಕಾರದ ಪ್ರತೀಕ ಎಂದು ಆಕ್ರೋಶ ಹೊರಹಾಕಿದ್ದಾರೆ. ಭಾರತವನ್ನು ಕೇವಲ ಹಾವು ಮತ್ತು ಹಾವಾಡಿಗರ ನಾಡು ಎಂದು ನೋಡುವ ಬ್ರಿಟಿಷ್ ಕಾಲದ ಕೀಳುಮಟ್ಟದ ಸ್ಟೀರಿಯೋಟೈಪ್ ಅಥವಾ ತಪ್ಪು ಕಲ್ಪನೆ ಇನ್ನೂ ಈ ಮಾಧ್ಯಮಗಳಲ್ಲಿ ಜೀವಂತವಾಗಿದೆ ಎಂದು ಹಲವರು ಟೀಕಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಚುನಾಯಿತ ನಾಯಕನನ್ನು ಈ ರೀತಿ ಬಿಂಬಿಸುವುದು ಇಡೀ ದೇಶಕ್ಕೆ ಮಾಡುವ ಅವಮಾನ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಕೆಲವು ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಪತ್ರಿಕೋದ್ಯಮವಲ್ಲ ಬದಲಾಗಿ ಜನಾಂಗೀಯ ದ್ವೇಷ. ಭಾರತದ ಆರ್ಥಿಕ ಮತ್ತು ತಾಂತ್ರಿಕ ಪ್ರಗತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಪಾಶ್ಚಿಮಾತ್ಯ ಗಣ್ಯ ಮಾಧ್ಯಮಗಳು ತಮ್ಮ ಅಜ್ಜ ಅಜ್ಜಿಯಂದಿರ ಕಾಲದ ಹಳೆಯ ಚಿಂತನೆಗಳನ್ನೇ ಈಗಲೂ ಪ್ರದರ್ಶಿಸುತ್ತಿವೆ ಎಂದು ಲೇವಡಿ ಮಾಡಿದ್ದಾರೆ.
ಈ ಹಿಂದೆ 2022ರಲ್ಲಿ ಸ್ಪ್ಯಾನಿಷ್ ಪತ್ರಿಕೆಯೊಂದು ಕೂಡ ಭಾರತದ ಬೆಳೆಯುತ್ತಿರುವ ಆರ್ಥಿಕ ಪ್ರಭಾವದ ಬಗ್ಗೆ ವರದಿ ಮಾಡುವಾಗ ಇದೇ ರೀತಿಯ ಹಾವಾಡಿಗರ ಚಿತ್ರವನ್ನು ಬಳಸಿ ಟೀಕೆಗೆ ಗುರಿಯಾಗಿತ್ತು. ಈ ರೀತಿಯ ವಸಾಹತುಶಾಹಿ ಮನಸ್ಥಿತಿಗೆ ಪ್ರಧಾನಿ ಮೋದಿ ಅವರು 2014ರಲ್ಲೇ ಅಮೆರಿಕದ ಮ್ಯಾಡಿಸನ್ ಸ್ಕ್ವೇರ್ ಭಾಷಣದಲ್ಲಿ ತಿರುಗೇಟು ನೀಡಿದ್ದರು. ಒಂದು ಕಾಲದಲ್ಲಿ ನಮ್ಮನ್ನು ಹಾವಾಡಿಗರ ದೇಶ ಎಂದು ವಿದೇಶಗಳಲ್ಲಿ ಬಿಂಬಿಸಲಾಗುತ್ತಿತ್ತು, ಆದರೆ ಇಂದು ನಾವು ಕಂಪ್ಯೂಟರ್ ಮೌಸ್ ಹಿಡಿದು ಜಗತ್ತನ್ನು ಆಳುತ್ತಿರುವ ತಂತ್ರಜ್ಞಾನದ ನಾಡು ಎಂದು ಅವರು ಹೇಳಿದ್ದರು.
ನಾರ್ವೆ ಪತ್ರಕರ್ತೆಯ ಹಠಮಾರಿ ವರ್ತನೆ ಮತ್ತು ಈಗಿನ ಪತ್ರಿಕೆಯ ಜನಾಂಗೀಯ ವ್ಯಂಗ್ಯಚಿತ್ರವು ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಉದಯವನ್ನು ಅರಗಿಸಿಕೊಳ್ಳಲಾಗದೆ ವಿಕೃತವಾಗಿ ವರ್ತಿಸುತ್ತಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಭಾರತವು ಇಂದು ವಿಶ್ವದ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದ್ದರೂ, ಕೆಲವು ರಾಷ್ಟ್ರಗಳು ಇನ್ನೂ ಹಳೆಯ ಕನ್ನಡಕದ ಮೂಲಕವೇ ಭಾರತವನ್ನು ನೋಡುತ್ತಿರುವುದು ವಿಷಾದನೀಯ.








