ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಒಲಿದ ‘ಜೀವಮಾನ ಸಾಧನೆ’ ಪ್ರಶಸ್ತಿ..!
ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿ ಅನಾರೋಗ್ಯದ ಕಾರಣದಿಂದ ವರ್ಷಗಳ ಕಾಲ ತೆರೆಯಿಂದ ಮರೆಯಾಗಿ ಮತ್ತೆ ‘ರಾಜಮಾರ್ತಾಂಡ’ನಾಗಿ ತೆರೆ ಮೇಲೆ ದರ್ಶನ ನೀಡಿದ್ದ ರಾಘವೇಂದ್ರ ರಾಜಕುಮಾರ್ ಅವರಿವಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಾದಾ ಸಾಹೇಬ್ ಫಾಲ್ಕೆ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ಈ ಕುರಿತಂತೆ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರ ಸ್ಯಾಂಡಲ್ ವುಡ್ ಜರ್ನಿಯನ್ನು ಝಲಕ್ ತೋರಿಸಲಾಗಿದೆ.
ಇನ್ನೂ ನಿನ್ನೆ ಬೆಂಗಳೂರಿನಲ್ಲಿ ನಡೆದ ಇನ್ನೋವೆಟಿವ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಅಪ್ಪಾಜಿ, ಅಮ್ಮ, ಕುಟುಂಬ ವರ್ಗ ಹಾಗೂ ನನ್ನೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಿಸುತ್ತಿದ್ದೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರು ಇಲ್ಲಿಯರೆಗೂ 23 ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅಲ್ಲದೇ 5 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2019ರಲ್ಲಿ ತೆರೆ ಕಂಡ ಅಮ್ಮನ ಮನೆ ಸಿನಿಮಾಗೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಉತ್ತಮ ನಟ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದೆ.