ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟಿನ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ನೀಡಿದ ನೋಟಿಸ್ ಮೇರೆಗೆ ಇಂದು ಬೆಳಿಗ್ಗೆ 10 ಗಂಟೆಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರ ಮುಂದೆ ಹಾಜರಾಗಬೇಕಿದೆ.
ನಿನ್ನೆಯೇ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಇಂದು ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಸೂಚಿಸಲಾಗಿತ್ತು. ಆದರೆ, ರಾಗಿಣಿ ಮೊಬೈಲ್ ರಾತ್ರಿಯಿಂದಲೇ ಸ್ವಿಚ್ ಆಫ್ ಆಗಿದೆ. ಯಲಹಂಕದ ನ್ಯಾಯಾಂಗ ಬಡಾವಣೆ ಮನೆಯಲ್ಲಿಯೂ ರಾಗಿಣಿ ಇಲ್ಲ. ಇಂದಿರಾ ನಗರದ ಸ್ನೇಹಿತರ ಮನೆಗೆ ಹೋಗಿದ್ದಾರೆ ಎಂದು ಮನೆಯ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹಾಗಾದರೆ, ನಟಿ ರಾಗಿಣಿ ದ್ವಿವೇದಿ ಎಲ್ಲಿಗೆ ಹೋಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೇಕೆ, ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗ್ತಾರಾ? ವಿಚಾರಣೆಗೆ ಚಕ್ಕರ್ ಹೊಡೆದು ತಲೆಮರೆಸಿಕೊಳ್ಳುತ್ತಾರಾ ಎಂಬ ಮಾತುಗಳು ಸ್ಯಾಂಡಲ್‍ವುಡ್ ವಲಯದಲ್ಲಿ ಕೇಳಿ ಬರುತ್ತಿವೆ.

ರಾಗಿಣಿ ಸ್ನೇಹಿತ ಹಾಗೂ ಜಯನಗರ ಆರ್‍ಟಿಒ ಸಿಬ್ಬಂದಿ ರವಿಶಂಕರ್‍ನನ್ನು ನಿನ್ನೆಯೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತಡೆ ರಾತ್ರಿವರೆಗೆ ತೀವ್ರ ವಿಚಾರಣೆ ನಡೆಸಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ರಾಗಿಣಿಗೆ ನೋಟಿಸ್ ನೀಡಲಾಗಿದೆ.
ಹಾಗಾದರೆ ರಾಗಿಣಿ ಹಾಗೂ ರವಿಶಂಕರ್ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದರಾ ? ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಸೇವಿಸುತ್ತಿದ್ದರಾ ಎಂಬ ಪ್ರಶ್ನೆ ಈಗ ಎದುರಾಗಿದೆ.









