ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ನಂಟು ಕ್ಷಣಕ್ಷಣಕ್ಕೂ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ಆಪ್ತ ರವಿಶಂಕರ್‍ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದರ ಬೆನ್ನಲ್ಲೇ, ಸ್ಯಾಂಡಲ್‍ವುಡ್‍ನ ಮತ್ತೊರ್ವ ನಟಿ ಸಂಜನಾ ಗರ್ಲಾನಿಗೂ ಡ್ರಗ್ಸ್ ನಂಟು ಕಂಟಕ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಜನಾ ಗರ್ಲಾನಿ ಆಪ್ತ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ರಾಹುಲ್ ಎಂಬಾತನನ್ನು ನಿನ್ನೆಯೇ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಾಹುಲ್‍ನನ್ನು ಆತನ ಕಾರಿನ ಜತೆಗೆ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದುಕೊಂಡು ಬರಲಾಗಿದೆ. ಈ ನಡುವೆ, ರಾಹುಲ್, ನನಗೆ ಆರೋಗ್ಯ ಸರಿಯಿಲ್ಲ, ಎದೆನೋವು ಬರುತ್ತಿದೆ. ನನ್ನನ್ನು ಬಿಟ್ಟು ಬಿಡಿ ಎಂದು ಸಿಸಿಬಿ ಪೊಲೀಸರ ಮುಂದೆ ಹೈಡ್ರಾಮ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಟಿ ಸಂಜನಾ ಜತೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಹುಲ್‍ಗೆ ರಾಗಿಣಿ ಆಪ್ತ ರವಿಶಂಕರ್ ಕೂಡ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹೈಎಂಡ್ ಪಾರ್ಟಿಗಳಲ್ಲಿ ರಾಹುಲ್ ಪಾಲ್ಗೊಳ್ಳುತ್ತಿದ್ದು, ಅಲ್ಲಿಗೆ ನಟಿ ಸಂಜನಾರÀನ್ನು ಕರೆದುಕೊಂಡು ಹೋಗುತ್ತಿದ್ದ. ಜತೆಗೆ ಆತ ಆಯೋಜಿಸುವ ಪಾರ್ಟಿಗಳಿಗೂ ಸಂಜನಾ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಈ ಪಾರ್ಟಿಗಳಲ್ಲಿ ಡ್ರಗ್ಸ್ ಬಳಕೆಯಾಗುತ್ತಿತ್ತಾ ಇಲ್ಲವಾ ಎಂಬುದು ಸಿಸಿಬಿ ಪೊಲೀಸರ ವಿಚಾರಣೆಯಲ್ಲಿ ಹೊರಬರಬೇಕಿದೆ.
ನಾನು ಎಲ್ಲಿಯೂ ಓಡಿ ಹೋಗಿಲ್ಲ: ನಟಿ ಸಂಜನಾ..!
ನಾನು ಮನೆಯಲ್ಲಿ ಇದ್ದೇನೆ, ಆರಾಮವಾಗಿ ಇದ್ದೇನೆ, ಎಲ್ಲಿಯೂ ಓಡಿ ಹೋಗಿಲ್ಲ. ನನ್ನನ್ನು ಸದ್ಯಕ್ಕೆ ಡಿಸ್ಟರ್ಬ್ ಮಾಡಬೇಡಿ, ಅಗತ್ಯ ಬಂದಾಗ ನಾನೇ ಬಂದು ಮಾತನಾಡುತ್ತೇನೆ ಎಂದು ನಟಿ ಸಂಜನಾ ಗರ್ಲಾನಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.








