ನವದೆಹಲಿ : ಕೊರೊನಾ, ಚೀನಾ, ಜಿಡಿಪಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರುತ್ತಲೇ ಇರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನೋಟ್ ಬ್ಯಾನ್ ವಿಷಯವಾಗಿ ಟ್ವಿಟರ್ ವಿಡಿಯೊ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನೋಟು ರದ್ದತಿಯು ಜಿಡಿಪಿ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡಿದೆ. ದೇಶದ ಬಡವರು, ರೈತರು ಹಾಗೂ ಅಸಂಘಟಿತ ವಲಯದ ವಿರುದ್ಧ ಕೈಗೊಳ್ಳಲಾಗಿರುವ ಈ ಕ್ರಮವನ್ನು ವಿರೋಧಿಸಿ ದೇಶವೇ ಒಂದಾಗಿ ಹೋರಾಟ ನಡೆಸಬೇಕು ಎಂದು ರಾಹುಲ್ ಕರೆ ನೀಡಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ನಲ್ಲಿ ‘ಪ್ರಧಾನಿ ಮೋದಿ ಅವರ ಕ್ಯಾಷ್ಲೆಸ್ ಇಂಡಿಯಾ ಎಂಬುದು ರೈತರು, ಕಾರ್ಮಿಕರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳಿಲ್ಲದ ಭಾರತವನ್ನು ನಿರ್ಮಿಸುವುದೇ ಆಗಿದೆ. ನವೆಂಬರ್ 8, 2016ರಂದು ಉರುಳಿದ ದಾಳಗಳ ಭಯಾನಕ ಪರಿಣಾಮವು ಆಗಸ್ಟ್ 31, 2020 ರಂದು ಬಹಿರಂಗವಾಗಿದೆ’. ಜಿಡಿಪಿ ಕುಸಿತದ ಜೊತೆಗೆ ನೋಟು ರದ್ದು ಕ್ರಮವು ಅಸಂಘಟಿತ ವಲಯದದ ಆರ್ಥಿಕತೆಯನ್ನು ಹೇಗೆ ಮುರಿಯಿತೆಂತು ತಿಳಿಯಲು ಈ ವಿಡಿಯೊ ನೋಡಿ ಎಂದು ತಿಳಿಸಿದ್ದಾರೆ.
ರಾಹುಲ್ ವಿಡಿಯೋದಲ್ಲಿ, ‘ನವೆಂಬರ್ 8, ರಾತ್ರಿ 8ಕ್ಕೆ ಮೋದಿ ಘೋಷಿಸಿದ ಆ ನಿರ್ಧಾರ ಇಡೀ ದೇಶವೇ ಬ್ಯಾಂಕ್ಗಳ ಮುಂದೆ ಸಾಲಿನಲ್ಲಿ ನಿಲ್ಲುವಂತೆ ಮಾಡಿತು. ಈ ಕ್ರಮದಿಂದಾದ ಪ್ರಯೋಜನವೇನು? ಕಪ್ಪುಹಣ ಸಿಕ್ಕಿತೇ? ಇಲ್ಲ. ನೋಟು ರದ್ದತಿಯಿಂದ ಪಡವರಿಗೆ ಸಿಕ್ಕಿದ್ದೇನು? ಏನೂ ಇಲ್ಲ. ಹಾಗಾದರೆ ಯಾರಿಗೆ ಲಾಭವಾಯಿತು? ಕೇವಲ ಉದ್ಯಮಿಗಳಿಗೆ. ಕೆಲವೇ ಉದ್ಯಮಿಗಳ ಸಾಲಮನ್ನಾ ಮಾಡಲು ನಿಮ್ಮ ಹಣವನ್ನು ಬಳಸಲಾಯಿತು. ನೇರವಾಗಿ ನಗದು ವಿನಿಮಯದೊಂದಿಗೆ ಕೆಲಸ ನಿರ್ವಹಿಸುವ ಅಸಂಘಟಿತ ವಲಯದಿಂದ ಎಲ್ಲ ಹಣವನ್ನು ಹೊರತೆಗೆಯುವುದು ನೋಟು ರದ್ದತಿಯ ಹಿಂದಿನ ಉದ್ದೇಶ. ನಗದುರಹಿತ ಭಾರತ ನಿರ್ಮಾಣವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಂದರೆ, ಅಸಂಘಟಿತ ವಲಯವನ್ನು ನಾಶ ಮಾಡುವುದು ಎಂದರ್ಥ’ ಎಂದು ವಾಗ್ದಾಳಿ ನಡೆಸಿದ್ದಾರೆ.