ನವದೆಹಲಿ : ಮನ್ ಕೀ ಬಾತ್..! ಪ್ರಧಾನಿ ನರೇಂದ್ರ ಮೋದಿ ಅವರ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ದೇಶ ವಿದೇಶಗಳಲ್ಲೂ ಈ ಕಾರ್ಯಕ್ರಮಕ್ಕೆ ಫ್ಯಾನ್ಸ್ ಇದ್ದಾರೆ. ಪ್ರಧಾನಿಗಳು ಈ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ತಮ್ಮ ಅನಿಸಿಕೆ, ವಿಚಾರಧಾರೆಗಳನ್ನು, ಸದ್ಯ ಸ್ಥಿತಿಗತಿಗಳ ಬಗ್ಗೆ ಜನರೊಂದಿಗೆ ಹಂಚಿಕೊಳ್ಳುತ್ತಾರೆ.
ನಮೋ ಹಾದಿಯಲ್ಲಿ ರಾಗಾ..!
ಇದೀಗ ಪ್ರಧಾನಿಗಳ ಮನ್ ಕೀ ಬಾತ್ ನಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮನ್ ಕೀ ಬಾತ್ ಆರಂಭಿಸುವುದಾಗಿ ಹೇಳಿದ್ದಾರೆ. ಕೊರೊನಾ ನಿರ್ವಹಣೆ ಮತ್ತು ಲಡಾಖ್ ಸಂಘರ್ಷದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬುಸುಗುಟ್ಟುತ್ತಿರೋ ರಾಹುಲ್, ಇಂದಿನಿಂದ ತಮ್ಮದೇಯಾದ ಮನ್ ಕೀ ಬಾತ್ ಆರಂಭಿಸೋದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ರಾಹುಲ್ ಗಾಂದಿ, ‘ಸುಳ್ಳಿನ ನಿರೂಪಣೆ ಭಾರತವನ್ನು ಛಿದ್ರಮಾಡುತ್ತಿದೆ. ಅಂತಹ ಅನೇಕ ವರದಿಗಳ ಸತ್ಯವನ್ನು ನಾನು ಹೊರತರುತ್ತೇನೆ. ಪ್ರಚಲಿತ ವಿದ್ಯಮಾನ, ಇತಿಹಾಸ ಮತ್ತು ಬಿಕ್ಕಟ್ಟು ಪರಿಹಾರದ ಕುರಿತು ಮಾತನಾಡುತ್ತೇನೆ. ಸತ್ಯದ ಬಗ್ಗೆ ತಿಳಿಯಲು ಆಸಕ್ತಿ ಇರುವವರು ಇದನ್ನು ಕೇಳಬಯಸುತ್ತೇನೆ. ನಾಳೆಯಿಂದ, ನಾನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ವಿಡಿಯೋದಲ್ಲಿ ಹಂಚಿಕೊಳ್ಳುತ್ತೇನೆ ಎಂದು ನಿನ್ನೆ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಇದೇ ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಟೀಕಿಸಿದ್ದರು. ಆಗ ಟೀಕೆ ಮಾಡಿದವರೇ ಈಗ ನಮೋ ದಾರಿ ತುಳಿದಿರೋದು ಚರ್ಚೆಗೆ ಗ್ರಾಸವಾಗಿದೆ.








