ಅಗ್ನಿಪಥ್, ಜಿಎಸ್‌ಟಿ ಕುರಿತು ಕಾಂಗ್ರೆಸ್ ಗದ್ದಲ ರಾಜ್ಯಸಭೆ ಕಲಾಪ ಮುಂದೂಡಿಕೆ
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಿದೆ. ಮೊದಲ ದಿನವೇ ಬೆಲೆ ಏರಿಕೆ ಮತ್ತು ಜಿಎಸ್‌ಟಿಯಂತಹ ವಿಷಯಗಳ ಕುರಿತು ಕಾಂಗ್ರೆಸ್ ಸಂಸದರು ಘೋಷಣೆ ಕೂಗಿ ಅಡ್ಡಿಯುಂಟು ಪಡಿಸಿದರು. ಹಾಗಾಗಿ, ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.
ಇದಕ್ಕೂ ಮುನ್ನ ಮೇಲ್ಮನೆಗೆ ಹೊಸದಾಗಿ ಆಯ್ಕೆಯಾದ ಹಲವು ರಾಜ್ಯಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರು ಕೆಲವು ಅವಲೋಕನಗಳನ್ನು ತಿಳಿಸುತ್ತಿದ್ದಂತೆ ಹಲವಾರು ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಸದನದ ಕಲಾಪಕ್ಕೆ ಅವಕಾಶ ನೀಡದಿರಲು ಕೆಲವರು ತೀರ್ಮಾನಿಸಿರುವುದರಿಂದ ಹಾಗೂ ಸದಸ್ಯರಿಗೆ ಅಧ್ಯಕ್ಷೀಯ ಚುನಾವಣೆಗೆ ತೆರಳಿ ಮತಚಲಾಯಿಸಲು ಅನುವು ಮಾಡಿಕೊಟ್ಟಿರುವುದರಿಂದ ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡುತ್ತಿದ್ದೇನೆ ಎಂದು ಸಭಾಪತಿಯವರು ಕಲಾಪವನ್ನು ಮುಂದೂಡಿದರು.
ಕಲಾಪದ ಶುರುವಿನಲ್ಲಿ ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ, ಮಾಜಿ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಕೆನಾಯನ್ ಮಾಜಿ ಅಧ್ಯಕ್ಷ ಮ್ವೈ ಕಿಬಾಕಿ ಅವರಿಗೆ ಸದನವು ಗೌರವ ಸಲ್ಲಿಸಿತು. ಮಾಜಿ ಸದಸ್ಯರಾದ ಕಿಶೋರ್ ಕುಮಾರ್ ಮೊಹಂತಿ, ರಾಬರ್ಟ್ ಖರ್ಶಿಯಿಂಗ್, ಕೆ ಕೆ ವೀರಪ್ಪನ್ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರಿಗೂ ಸಂತಾಪ ಸೂಚಿಸಲಾಯಿತು.