ಮುಂದಿನ ವಿರೋಧ ಪಕ್ಷದ ನಾಯಕನ ರೇಸ್ ನಲ್ಲಿ ಚಿದಂಬರಂ vs ದಿಗ್ವಿಜಯ್
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಖರ್ಗೆ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೀಗ ಹಲವು ನಾಯಕರ ಹೆಸರುಗಳು ಕೇಳಿಬರುತ್ತಿವೆ.
ಈ ವರ್ಷದ ಮೇ ತಿಂಗಳಲ್ಲಿ ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷವು ‘ಒಬ್ಬ ವ್ಯಕ್ತಿ, ಒಂದು ಹುದ್ದೆ’ ಎಂಬ ತನ್ನ ಹೊಸ ತತ್ವವನ್ನು ಘೋಷಿಸಿತ್ತು. ಹಾಗಾಗಿ ಖರ್ಗೆ ರಾಜಿನಾಮೆಯಿಂದ ತೆರೆವಾದ ರಾಜ್ಯದ ವಿರೋಧ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಲವು ನಾಯಕರ ನಡುವೆ ಪೈಪೋಟಿ ಇದೆ.
ಮಲ್ಲಿಕಾರ್ಜುನ ಖರ್ಗೆ ನಂತರ ಹಿರಿಯ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ ಮತ್ತು ದಿಗ್ವಿಜಯ್ ಸಿಂಗ್ ಅವರ ಹೆಸರುಗಳು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಕೇಳಿಬರುತ್ತಿವೆ. ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಕೇಳಿ ಬಂದ ನಂತರ ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದ ರೇಸ್‌ನಲ್ಲಿ ಪ್ರಮೋದ್ ತಿವಾರಿ ಕೂಡ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿಗೆ ವೇದಿಕೆ ಸಜ್ಜಾಗಿದೆ. ಸಧ್ಯಕ್ಕಂತೂ ಖರ್ಗೆ ಅವರೇ ಪ್ರಬಲ ಅಭ್ಯರ್ಥಿ ಎನಿಸುತ್ತಿದೆ.
ಕಾಂಗ್ರೆಸ್‌ನ ಉನ್ನತ ನಾಯಕರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಬೆಂಬಲಿಸಿದ್ದಾರೆ. ಈ ನಾಯಕರಲ್ಲಿ ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಎಕೆ ಆಂಟನಿ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚವಾಣ್ ಮತ್ತು ಮನೀಶ್ ತಿವಾರಿ ಅವರ ಹೆಸರುಗಳಿವೆ.
Rajya Sabha Leader: Chidambaram or Digvijay, who will be the Leader of Opposition in Rajya Sabha? The post has been vacated by Kharge’s resignation.