ಖಾಸಗಿ ಕನ್ನಡ ವಾಹಿಸಿ ಜೀ ಕನ್ನಡ ನಡೆಸಿಕೊಡುವ ಜನಪ್ರಿಯ ಹಾಸ್ಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ಸೀಜನ್ 3ರ ವಿನ್ನರ್ ಆಗಿ ಉಡುಪಿಯ ರಾಕೇಶ್ ಪೂಜಾರಿ ಹೊರಹೊಮ್ಮಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಜಗ್ಗೇಶ್ ಕಾಮಿಡಿ ಕಿಲಾಡಿಗಳು ಸೀಸನ್ 3 ರ ವಿನ್ನರ್ ಆಗಿ ರಾಕೇಶ್ ಪೂಜಾರಿ ಮತ್ತು ರನ್ನರ್ ಅಪ್ ಆಗಿ ಸಂತೋಷ್ ಹೆಸರನ್ನು ಘೋಷಣೆ ಮಾಡಿದ್ದಾರೆ. ಉಡುಪಿಯ ರಾಕೇಶ್ ಪೂಜಾರಿ ಹೆಸರು ಘೋಷಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದ ಜನರು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದ್ರು. ಜೀ ಕನ್ನಡ ವಾಹಿನಿ ವತಿಯಿಂದ ವಿನ್ನರ್ 8 ಲಕ್ಷ ಹಾಗೂ ರನ್ನರ್ ಅಪ್ ಗೆ 4 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಗಿದೆ.
ಕೋಳಿ ಕಳ್ಳ ಖ್ಯಾತಿಯ ಮನೋಹರ್ ಹಾಗೂ ಬಾ ಮಲಿಕೋ ಖ್ಯಾತಿಯ ದಾನಪ್ಪ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಒಟ್ಟು 15 ಸ್ಪರ್ಧಿಗಳು ಭಾಗಿಯಾಗಿದ್ರು. ಒಬ್ಬರಿಗೊಬ್ಬರು ಉತ್ತಮ ಪ್ರದರ್ಶನ ನೀಡುತ್ತಾ ರಾಜ್ಯದ ಜನರ ಹಾಗೂ ತೀರ್ಪುಗಾರರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ರು. ತೀವ್ರ ಪೈಪೋಟಿಯ ನಡುವೆ ಅಂತಿಮವಾಗಿ ಉಡುಪಿಯ ರಾಕೇಶ್ ಪೂಜಾರಿ ಟ್ರೋಫಿಯನ್ನು ಎತ್ತಿ ಹಿಡಿದು ಮುತ್ತಿಟ್ಟಿದ್ದಾರೆ. ಈ ಮೂಲಕ 26 ವಾರಗಳ ಕಾಲ ನಡೆದ ಕಾಮಿಡಿ ಕಿಲಾಡಿಗಳ ಸುದೀರ್ಘ ಪಯಣಕ್ಕೆ ಅದ್ಧೂರಿಯಾಗಿ ತೆರೆ ಎಳೆಯಲಾಗಿದೆ.
ಇನ್ನು, ಹಾಸನದ ಅರಸೀಕೆರೆಯಲ್ಲಿ ನಡೆದ ಕಾಮಿಡಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು 50 ಸಾವಿರಕ್ಕೂ ಹೆಚ್ಚು ಜನರು ಕಿಕ್ಕಿರಿದು ನೆರೆದಿದ್ದರು. ಹಲವು ವಿಶೇಷಗಳಿಂದ ಕೂಡಿದ ಕಾಮಿಡಿ ಕಿಲಾಡಿಗಳು ಸೀಜನ್-3ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಇದೇ ಮಾರ್ಚ್ 07 ಶನಿವಾರ ಸಂಜೆ 6 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.








