ಉತ್ತರ ಪ್ರದೇಶದ ರಾಮಜನ್ಮಭೂಮಿಯಿಂದ ರಾಮ ನವಮಿಯ ನೇರ ಪ್ರಸಾರ…
1 min read
ಉತ್ತರ ಪ್ರದೇಶದ ರಾಮಜನ್ಮಭೂಮಿಯಿಂದ ರಾಮ ನವಮಿಯ ನೇರ ಪ್ರಸಾರ…
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಧಿಕಾರಕ್ಕೆ ಮರಳಿದ ನಂತರ ನಡೆಯುತ್ತಿರುವ ಮೊದಲ ರಾಮನವಮಿ (ಭಗವಾನ್ ರಾಮನ ಜನ್ಮದಿನ) ಇದಾಗಿರುವುದರಿಂದ ಆಚರಣೆಗಳು ಹೆಚ್ಚು ವಿಶೇಷವಾಗಿ ಜರುಗಲಿವೆ. ರಾಜ್ಯ ಸರ್ಕಾರವು ಅಯೋಧ್ಯೆಯ ರಾಮಜನ್ಮಭೂಮಿಯಿಂದ ವಿಶೇಷ ಪೂಜೆ ಮತ್ತು ಇತರ ಆಚರಣೆಗಳನ್ನು ನೇರ ಪ್ರಸಾರ ಮಾಡಲು ನಿರ್ಧರಿಸಿದೆ.
ಆಗಸ್ಟ್ 2020 ರಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾದ ನಂತರ ಅಯೋಧ್ಯೆಯಲ್ಲಿ ಇದು ಮೊದಲ ಭವ್ಯವಾದ ರಾಮನವಮಿ ಆಚರಣೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ವರ್ಷಗಳಿಂದ ಅಯೋಧ್ಯೆ ನಗರದಲ್ಲಿ ಆಚರಣೆಗಳು ಜರುಗಿರಲಿಲ್ಲ.
ಏಪ್ರಿಲ್ 2 ರಂದು ಪ್ರಾರಂಭವಾದ ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವವು ಭಾನುವಾರ ರಾಮನ ಜನ್ಮದೊಂದಿಗೆ ರಾಮನವಮಿಯಲ್ಲಿ ಮುಕ್ತಾಯಗೊಳ್ಳಲಿದೆ. ರಾಮ ಜನ್ಮಭೂಮಿಯಲ್ಲಿ ಗ್ರ್ಯಾಂಡ್ ರಾಮ್ ನವಮಿ ಆಚರಣೆಗಳನ್ನ ಏರ್ಪಡಿಸಲಾಗಿದೆ. ಅಲ್ಲಿ ಭಗವಾನ್ ರಾಮನು, ಸೀತಾ ದೇವಿ ಮತ್ತು ಅವನ ಸಹೋದರರೊಂದಿಗೆ ವಿರಾಜಮಾನರಾಗಲಿದ್ದಾರೆ. ರಾಮಜನ್ಮಭೂಮಿಯ ಒಳಗಿನ ತಾತ್ಕಾಲಿಕ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ.
ರಾಜ್ಯ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮೂಲಗಳ ಪ್ರಕಾರ, ಅಯೋಧ್ಯೆಯಿಂದ ರಾಮನವಮಿ ಆಚರಣೆಯನ್ನು ಪ್ರಸಾರ ಮಾಡುವ ಹಕ್ಕನ್ನು ದೂರದರ್ಶನ ಮತ್ತು ಪ್ರಮುಖ ಸುದ್ದಿ ಸಂಸ್ಥೆಗೆ ನೀಡಲಾಗಿದೆ. ರಾಮ ಜನ್ಮಭೂಮಿಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲು ಅಯೋಧ್ಯೆಯಾದ್ಯಂತ ಆಯ್ದ ಸ್ಥಳಗಳಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುವುದು. ಅಯೋಧ್ಯೆ ಆಡಳಿತವು ಭಾನುವಾರ ರಾಮ್ ಕಿ ಪೈಡಿ ಸೇರಿದಂತೆ ನಗರದಾದ್ಯಂತ ಎಂಟು ಸ್ಥಳಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಯೋಜಿಸಿದೆ.