Ram setu – ರಾಮಸೇತು ರಾಷ್ಟ್ರೀಯ ಸ್ಮಾರಕ ಘೋಷಣೆ ವಿಚಾರ; ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ…
ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಜುಲೈ 26 ರಂದು ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಲಿದೆ.
ಜುಲೈ 26 ರಂದು ಸ್ವಾಮಿ ಅವರ ಮನವಿಯನ್ನು ಆಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್ವಿ ರಾಮನ್ ಭರವಸೆ ನೀಡಿದರು. ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ಗೆ ಒತ್ತಾಯಿಸಲಾಗಿದೆ.
ತಮಿಳುನಾಡಿನ ರಾಮೇಶ್ವರಂ ಪುಣ್ಯಕ್ಷೇತ್ರದಿಂದ ಶ್ರೀಲಂಕವನ್ನ ಸಂಪರ್ಕಿಸುವ ಸೇತುವೆಗೆ ರಾಮಸೇತು ಎಂದು ಕರೆಯುತ್ತಾರೆ. ಇದನ್ನ ಆಡಂ ಬ್ರಿಡ್ಜ್ ಎಂದು ಸಹ ಕರೆಯುತ್ತಾರೆ.
ಈ ಸಮಸ್ಯೆಯು ದೀರ್ಘಕಾಲದಿಂದ ಬಾಕಿ ಉಳಿದಿದೆ ಮತ್ತು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಸುಬ್ರಮಣಿಯನ್ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಈ ವಿಷಯದ ಕುರಿತು ಭಾರತ ಸರಕಾರದ ನಿಲುವೇನು ಎಂಬ ಬಗ್ಗೆಯೂ ಪೀಠವು ಕೇಳಿದೆ. ಈ ಕುರಿತು ಸರಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಸ್ವಾಮಿ ಹೇಳಿದ್ದಾರೆ.
“ರಾಮಸೇತುವಿನ ಅಸ್ತಿತ್ವದ ಕುರಿತು ಕೇಂದ್ರವು ಒಪ್ಪಿಕೊಂಡಿರುವುದರಿಂದ ಮೊಕದ್ದಮೆಯ ಮೊದಲ ಸುತ್ತಿನಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ರಾಷ್ಟ್ರೀಯ ಸ್ಮಾರಕವೆಂದು ರಾಮಸೇತುವನ್ನು ಘೋಷಿಸುವ ಸಲುವಾಗಿ ಮತ್ತು ನನ್ನ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಸಚಿವರು ೨೦೧೭ರಲ್ಲಿ ಸಭೆ ಕರೆದಿದ್ದರು. ಬಳಿಕ ಈ ಕುರಿತು ಯಾವುದೇ ಪ್ರಗತಿಯಾಗಿಲ್ಲʼʼ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಯುಪಿಎ-1 ಸರ್ಕಾರ ಆರಂಭಿಸಿದ ವಿವಾದಾತ್ಮಕ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಯ ವಿರುದ್ಧ ಸ್ವಾಮಿ ಅವರು ಪಿಐಎಲ್ನಲ್ಲಿ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸುವ ವಿಷಯವನ್ನು ಪ್ರಸ್ತಾಪಿಸಿದ್ದರು.