ಬಾಗಲಕೋಟೆ: ರಂಭಾಪುರಿ ಶ್ರೀ ಕಾರಿನತ್ತ ಚಪ್ಪಲಿ ಎಸೆತ ಹಾಗೂ ಕಾರಿಗೆ ತಡೆ ಒಡ್ಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಗಳ ಭಕ್ತರು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ತಾಲೂಕಿನ ಕಲಾದಗಿ ಗ್ರಾಮದಲ್ಲಿ ಮಹಿಳೆಯೊಬ್ಬರು ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಶ್ರೀಗಳ ಭಕ್ತರು ಆಕ್ರೋಶಗೊಂಡಿದ್ದು, ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್ ಗಂಗಾಧರ ಸ್ವಾಮೀಜಿ ನೇಮಕ ಮಾಡಿದ್ದರು. ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಆದರೆ, ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ನ್ಯಾಯಾಯಲಯದ ಮೆಟ್ಟಿಲೇರಿದೆ.