Ranji Trophy 2022 : ಮುಂಬೈಗೆ ಆಸರೆಯಾದ ಸೂರ್ಯಕುಮಾರ್
ಟೀಂ ಇಂಡಿಯಾದ ʼಮಿಸ್ಟರ್ 360*ʼ ಖ್ಯಾತಿಯ ಸೂರ್ಯಕುಮಾರ್ ಯಾದವ್ ದೇಶಿಯ ಕ್ರಿಕೆಟ್ನಲ್ಲೂ ತಮ್ಮ ಭರ್ಜರಿ ಬ್ಯಾಟಿಂಗ್ನಿಂದ ಮಿಂಚಿದ್ದಾರೆ. ಪ್ರಸಕ್ತ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಭರ್ಜರಿ ಬ್ಯಾಟಿಂಗ್ನಿಂದ ಮುಂಬೈ ತಂಡಕ್ಕೆ ಆಸರೆಯಾಗಿದ್ದಾರೆ.
ರಣಜಿ ಟ್ರೋಫಿಯ ಎಲೈಟ್ ಬಿ ಗುಂಪಿನಲ್ಲಿ ಮುಂಬೈ ತಂಡ ಸೌರಾಷ್ಟ್ರ ತಂಡವನ್ನ ಎದುರಿಸಿದ್ದು, 2ನೇ ದಿನದಾಟದಲ್ಲಿ ತಮ್ಮ ಕೌಂಟರ್ ಅಟ್ಯಾಕ್ ಬ್ಯಾಟಿಂಗ್ನಿಂದ 95 ರನ್ಗಳಿಸಿದ ಸೂರ್ಯಕುಮಾರ್, ಆ ಮೂಲಕ ಮುಂಬೈ ತಂಡಕ್ಕೆ ಆಸರೆಯಾದರು. ಸೌರಾಷ್ಟ್ರದ ಶರದ್ ಪವಾರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಸಿಲುಕಿತು.
ಆದರೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 95(107) ರನ್ಗಳಿಸಿ ತಂಡದ ಕೈಹಿಡಿದರು. ಅಲ್ಲದೇ ನಾಯಕ ಅಜಿಂಕ್ಯಾ ರಹಾನೆ(24) ಜೊತೆಗೂಡಿ 61 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಆಫ್ ಸ್ಪಿನ್ನರ್ ಯುವರಾಜ್ಸಿನ್ ದೋಡಿಯಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿ ಹೊರ ನಡೆದರು.
ಸೂರ್ಯಕುಮಾರ್ ಹಾಗೂ ಸರ್ಫರಾಜ್ ಖಾನ್ ಅವರ ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಮುಂಬೈ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 230 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ 289 ರನ್ಗಳಿಸಿತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಸೌರಾಷ್ಟ್ರ 6 ವಿಕೆಟ್ಗೆ 120 ರನ್ಗಳಿಸಿದೆ. ಆ ಮೂಲಕ ಸೌರಾಷ್ಟ್ರ ಸದ್ಯ 179 ರನ್ಗಳ ಮುನ್ನಡೆ ಹೊಂದಿದೆ.