Ranji Trophy 2023: ಭಾರತ ಟೆಸ್ಟ್ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿ ಮಯಂಕ್
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ಕನ್ನಡಿಗ ಮಯಂಕ್ ಅಗರ್ವಾಲ್, ಇದೀಗ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ತವಕದಲ್ಲಿದ್ದಾರೆ.
ಅದ್ಭುತ ಪ್ರದರ್ಶನದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಮಿಂಚಿದ್ದ ಮಯಂಕ್ ಅಗರ್ವಾಲ್, ನಂತರದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಕೇರಳ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿರುವ ಮಯಂಕ್, ಆ ಮೂಲಕ ಭಾರತದ ಟೆಸ್ಟ್ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.
ಅಲ್ಲದೇ ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿರುವ ಮಯಂಕ್ ಅಗರ್ವಾಲ್ ಕಳೆದ ಒಂಭತ್ತು ಪಂದ್ಯಗಳಲ್ಲಿ 8, 73, 51, 50, 117, 14, 52*, 10 ಹಾಗೂ 208 ರನ್‌ಗಳಿಸಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ 72.87ರ ಬ್ಯಾಟಿಂಗ್ ಸರಾಸರಿಯಲ್ಲಿ 583 ರನ್‌ಗಳಿಸಿದ್ದಾರೆ. ಇದಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮಯಂಕ್, 43ರ ಸರಾಸರಿಯಲ್ಲಿ 6437 ರನ್‌ಗಳಿಸಿದ್ದಾರೆ.
ಕೇರಳ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯ ಆಟವಾಡಿದ ಕರ್ನಾಟಕ ತಂಡದ ನಾಯಕ, 360 ಬಾಲ್‌ಗಳಲ್ಲಿ 17 ಬೌಂಡರಿ ಮತ್ತು 5 ಸಿಕ್ಸ್ ನೆರವಿನಿಂದ 208 ರನ್‌ಗಳಿಸಿದರು. ಪರಿಣಾಮ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 410 ರನ್‌ಗಳಿಸಿದೆ.
Ranji Trophy 2023 , mayank agarwal hoping to come back to test








