ರಣಜಿ ಟೂರ್ನಿ | ಕರ್ನಾಟಕಕ್ಕೆ 177 ರನ್ ಗಳ ಜಯ
ಚೆನ್ನೈ : ಜಮ್ಮು ಕಾಶ್ಮೀರದ ವಿರುದ್ಧ 177ರನ್ ಗಳ ಗೆಲುವಿನೊಂದಿಗೆ ರಣಜಿ ಟೂರ್ನಿಯ ಸಿ ಗುಂಪಿನಲ್ಲಿ ಕರ್ನಾಟಕ ತಂಡ ಅಗ್ರಸ್ಥಾನಕ್ಕೇರಿದೆ.
ಚೆನ್ನೈನ ಐಐಟಿ ಕೆಮ್ಪ್ಲಾಸ್ಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ತೋರಿತು. ಪರಿಣಾಮ ಕಾಶ್ಮೀರದ ವಿರುದ್ಧ ಕರ್ನಾಟಕ ಗೆಲುವಿನ ನಗೆ ಬೀರಿತು.
ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ ಕರುಣ್ ನಾಯರ್ 175 ರನ್ ಗಳ ನೆರವಿನಿಂದ 302 ರನ್ ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಕಾಶ್ಮೀರ ತಂಡ 93ಕ್ಕೆ ಆಲೌಟ್ ಆಯ್ತು. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ 6 ವಿಕೆಟ್ ಪಡೆದರು.
ಭಾರಿ ಮೊತ್ತದ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 283ಗೆ ಡಿಕ್ಲೇರ್ ಮಾಡಿಕೊಂಡಿತು.
ಕರ್ನಾಟಕದ ಪರ ಕರುಣ್ ನಾಯರ್ ಅಜೇಯ 75, ಸಿದ್ಧಾರ್ಥ್ 72, ಪಡಿಕ್ಕಲ್ 49, ಸಮರ್ಥ್ 62 ರನ್ ಗಳಿಸಿದ್ದರು.
ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವಿಗೆ ಕರ್ನಾಟಕ 508 ರನ್‌ಗಳ ಬೃಹತ್ ಗುರಿ ನೀಡಿತ್ತು.
3ನೇ ದಿನದಾಟದ ಮುಕ್ತಾಯಕ್ಕೆ ಜಮ್ಮು ಮತ್ತು ಕಾಶ್ಮೀರ 4 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು.
ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಬೌಲರ್ಗಳು ಎದುರಾಳಿ ತಂಡವನ್ನು 390 ರನ್ಗಳಿಗೆ ಆಲೌಟ್ ಮಾಡಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದರು.
ಮನೀಶ್ ಪಾಂಡೆ ಪಡೆ ಮಾರ್ಚ್ 3ರಿಂದ ಆರಂಭವಾಗಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ. ranji-trophy-karnataka-beat-jammu-and-kashmir saaksha tv