ಮಧ್ಯಪ್ರದೇಶ: ವ್ಯಕ್ತಿಯೊಬ್ಬ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ, ಮದುವೆ ದಿನ ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಶೋಕನಗರದಲ್ಲಿ ಈ ಅಮಾನುಷ ಘಟನೆ ನಡೆದಿದೆ. ಕಲು ಅಲಿಯಾಸ್ ಸಲೀಂ ಖಾನ್ ಆರೋಪಿ ಎನ್ನಲಾಗಿದೆ. ಆರೋಪಿಯು ಹಿಂದೆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಅಲ್ಲದೇ, ಮದುವೆಯಾಗುವಂತೆ ಮಾನಸಿಕ ಹಿಂಸೆ ನೀಡಿದ್ದ. ಆದರೆ, ಯುವತಿ ಬೇರೊಬ್ಬರನ್ನು ಮದುವೆಯಾಗುತ್ತಿದ್ದಾಳೆ ಎಂಬುವುದು ಗೊತ್ತಾಗುತ್ತಿದ್ದಂತೆ ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ತನ್ನ ಸಹಚರರಾದ ಜೋಧಾ, ಸಮೀರ್ ಮತ್ತು ಶಾರುಖ್ ಜೊತೆಗೆ ಯುವತಿಯ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಇದನ್ನು ಪ್ರತಿಭಟಿಸಿದ ಆಕೆಗೆ ಅಮಾನುಷವಾಗಿ ಹೊಡೆದಿದ್ದಾರೆ. ತಡೆಯಲು ಬಂದು ಆಕೆಯ ತಂದೆ ಮತ್ತು ತಮ್ಮನ ಕೈಯನ್ನು ಮುರಿದಿದ್ದಾರೆ. ತಾಯಿ ಸೇರಿದಂತೆ ಎದುರು ಬಂದವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಅಲ್ಲಿ ಹೆಚ್ಚು ಜನ ಸೇರುವುದನ್ನು ಕಂಡು ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲದೇ, ಮದುವೆಯಾಗದಂತೆ ಹುಡುಗನ ಮನೆಯವರಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.