ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅಂತಿಮ ವಿಧಿಗಳನ್ನು ಗುರುವಾರ ಮಧ್ಯಾಹ್ನ ಮುಂಬೈನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸೇರಿದ್ದರು. ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸದಲ್ಲಿರುವ ಹಿನ್ನಲೆಯಲ್ಲಿ ಅವರು ಗೈರಾಗಿದ್ದರು. ಹೀಗಾಗಿ ಅವರ ಪರವಾಗಿ ಅಮಿತ್ ಶಾ ಅವರು ರತನ್ ಟಾಟಾ ಅಂತ್ಯಕ್ರಿಯೆ ವೇಳೆ ಪಾಲ್ಗೊಂಡಿದ್ದರು.
ಕೇಂದ್ರ ಗೃಹ ಸಚಿವರೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಕೂಡ ಇದ್ದರು. ಮಹಾರಾಷ್ಟ್ರದ ನಾರಿಮನ್ ಪಾಯಿಂಟ್ ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ನಲ್ಲಿ ರತನ್ ಟಾಟಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಾರ್ಥಿವ ಶರೀರವನ್ನು 12 ಕಿ.ಮೀ ದೂರದ ವರ್ಲಿಯಲ್ಲಿರುವ ಸ್ಮಶಾನಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಯಿತು. ರತನ್ ಅವರಿಗೆ ಸಾವಿರಾರು ಜನರು ರಸ್ತೆ ಇಕ್ಕೆಲಗಳಲ್ಲಿ ನಿಂತು ವಿದಾಯ ಹೇಳಿದರು.