ಬೆಂಗಳೂರು: ಬೆಳಗಾವಿಯ ಪಿರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದವನ್ನು ಸಚಿವ ಸಿ.ಟಿ ರವಿ ಅವರು ಡಿ.ಜೆ ಹಳ್ಳಿ ಗಲಭೆಗೆ ಹೋಲಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಪ್ರತಿಮೆ ವಿವಾದ ಸಂಘರ್ಷದ ರೂಪ ಪಡೆದಿರುವುದು ದುರದೃಷ್ಟಕರ. ಸಂಘರ್ಷದ ಹಿಂದೆ ರಾಜಕೀಯ ದುರುದ್ದೇಶ ಇರಬಹುದು ಎಂದಿದ್ದಾರೆ.
ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಹಿಂದೆ ರಾಜಕೀಯ ಕೈವಾಡ ಇದೆ. ಆ ಜನ ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವ ಸಿ.ಟಿ ರವಿ ಅವರ ಹೇಳಿಕೆಯನ್ನು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಖಂಡಿಸಿದ್ದಾರೆ. ಪಿರನವಾಡಿ ಗಲಾಟೆಗೂ, ಡಿ.ಜೆ ಹಳ್ಳಿ ಗಲಭೆಗೂ ಎತ್ತಣಿಂದೆತ್ತ ಸಂಬಂಧ. ಸಚಿವರ ಹೇಳಿಕೆ ಸಮರ್ಥನೀಯವಲ್ಲ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಸಿ.ಟಿ ರವಿ, ಸಿದ್ದರಾಮಯ್ಯ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಕಾಗಿನೆಲೆ ಸ್ವಾಮೀಜಿ ಭೇಟಿಯಾಗಿದ್ದಾಗ ಸಿಎಂ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡೋದಾಗಿ ಹೇಳಿದ್ದರು. ಹೀಗಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುವುದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಚು ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದ್ದಾರೆ.