ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಕಪ್ ಎತ್ತುವ ಕನಸು ಎಲಿಮಿನೇಟರ್ನಲ್ಲೇ ಅಂತ್ಯವಾಗಿದೆ. ಆರ್ಸಿಬಿ ಕೆಕೆಆರ್ ವಿರುದ್ಧ ಸೋಲು ಕಾಣುವುದರೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಿದೆ.
14 ವರ್ಷಗಳಲ್ಲಿ ಒಮ್ಮೆಯೂ ಆರ್ಸಿಬಿ ಕಪ್ ಗೆಲ್ಲದೆ ನಿರಾಸೆ ಅನುಭವಿಸಿದೆ. ವಿರಾಟ್ ಕೊಹ್ಲಿ ನಾಯಕತ್ವ ಕೂಡ ಐಪಿಎಲ್ನಲ್ಲಿ ಟ್ರೋಫಿ ಇಲ್ಲದೆ ಅಂತ್ಯವಾಗಿದೆ.
ಶಾರ್ಜಾದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಉತ್ತಮ ಅನ್ನುವ ಆರಂಭವನ್ನೇ ತಂದುಕೊಟ್ಟರು.
ದೇವದತ್ ಪಡಿಕಲ್ 21 ರನ್ಗಳಿಸಿ ಮೊದಲಿಗರಾಗಿ ಔಟಾದರು. ಶ್ರೀಕರ್ ಭರತ್ ರನ್ಗಾಗಿ ಪರದಾಡಿ ನರೈನ್ಗೆ ವಿಕೆಟ್ ಒಪ್ಪಿಸಿದರು.
39 ರನ್ಗಳಿಸಿ ಆಟಕ್ಕೆ ಕುದುರಿಕೊಳ್ಳಲು ಸಿದ್ಧತೆ ಮಾಡುತ್ತಿದ್ದ ವಿರಾಟ್ ಕೊಹ್ಲಿ ನರೈನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದು ಆರ್ಸಿಬಿಗೆ ದೊಡ್ಡ ಆಘಾತ ನೀಡಿತ್ತು.
ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಎಬಿ ಡಿ ವಿಲಿಯರ್ಸ್ ಆಟವೂ ನರೈನ್ ಮುಂದೆ ನಡೆಯಲಿಲ್ಲ. ಡಿ ವಿಲಿಯರ್ಸ್ 11 ರನ್ಗಳಿಸಿ ಬೌಲ್ಡ್ ಆದ್ರೆ, ಮ್ಯಾಕ್ಸ್ವೆಲ್ 15 ರನ್ಗಳಿಸಿ ಔಟಾದರು.
ಡೇನಿಯಲ್ ಕ್ರಿಶ್ಚಿಯನ್ ರನೌಟ್ ಬಲೆಯಲ್ಲಿ ಬಿದ್ದರೆ, ಶಹಬಾಸ್ ಅಹ್ಮದ್ ಫರ್ಗ್ಯೂಸನ್ಗೆ ವಿಕೆಟ್ ಒಪ್ಪಿಸಿದರು.
20 ಓವರುಗಳಲ್ಲಿ ಆರ್ಸಿಬಿ 7 ವಿಕೆಟ್ ಕಳೆದುಕೊಂಡು 138 ರನ್ಗಳಿಸಿತು. ನರೈನ್ 4 ವಿಕೆಟ್ ಪಡೆದರೆ ಪರ್ಗ್ಯೂಸನ್ 2 ವಿಕೆಟ್ ಪಡೆದು ಕೆಕೆಆರ್ ಬೌಲಿಂಗ್ನಲ್ಲಿ ಮಿಂಚಿದರು.
ಗುರಿ ಬೆನ್ನಟ್ಟ ಹೊರಟ ಕೆಕೆಆರ್ಗೆ ಶುಭ್ಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ತಂದುಕೊಟ್ಟರು. ಗಿಲ್ ಕೇವಲ 18 ಎಸೆತಗಳಲ್ಲಿ 29 ರನ್ಗಳಿಸಿ ಔಟಾದರು.
ರಾಹುಲ್ ತ್ರಿಪಾಠಿ ಬೇಗನೆ ಔಟಾದರು. ನಿತೀಶ್ ರಾಣಾ ಮತ್ತು ಅಯ್ಯರ್ ನಡುವೆ ಉತ್ತಮ ಜೊತೆಯಾಟ ಬಂದಿತ್ತು. ಆದರೆ ಹರ್ಷಲ್ ಪಟೇಲ್ 26 ರನ್ಗಳಿಸಿದ್ದ ಅಯ್ಯರ್ ವಿಕೆಟ್ ಪಡೆದು ಆರ್ಸಿಬಿಗೆ ಬ್ರೇಕ್ ತಂದುಕೊಟ್ಟರು.
ಭಡ್ತಿ ಪಡೆದು ಕ್ರೀಸ್ಗಿಳಿದ ಸುನೀಲ್ ನರೈನ್ ಆರ್ಸಿಬಿ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು. ತಾನೆದುರಿಸಿದ ಮೊದಲ 3 ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ಕೆಕೆಆರ್ ಗೆಲುವನ್ನು ಸುಲಭವಾಗಿಸಿದರು.
ಈ ನಡುವೆ ಚಹಲ್ 23 ರನ್ಗಳಿಸಿದ ರಾಣಾ ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 15 ಎಸೆತಗಳಲ್ಲಿ 26 ರನ್ಗಳಿಸಿದ್ದ ನರೈನ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಪಡೆದು ಪಂದ್ಯವನ್ನು ಕೊನೆಯ ಓವರ್ಗೆ ಕೊಂಡೊಯ್ದರು.
ಕೊನೆಯ ಓವರ್ನಲ್ಲಿ ಕೆಕೆಆರ್ ಗೆಲುವಿನಗೆ 7 ರನ್ಗಳು ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ಶಕೀಬ್ ಅಲ್ ಹಸನ್ ಕೆಕೆಆರ್ ಗೆಲುವನ್ನು ಸುಲಭವಾಗಿಸಿದರು. 19.4 ಓವರುಗಳಲ್ಲಿ ಕೆಕೆಆರ್ ಗುರಿ ತಲುಪಿ ಆರ್ಸಿಬಿಯನ್ನು ಟೂರ್ನಿಯಿಂದ ಹೊರಗಟ್ಟಿತು.









