ವರುಣ್ ಚಕ್ರವರ್ತಿ ಸ್ಪಿನ್ ಮೋಡಿ, ಆಂಡ್ರೆ ರಸೆಲ್ ಮ್ಯಾಜಿಕ್ ಬೌಲಿಂಗ್.. ಇವರ ಸಾಹಸಕ್ಕೆ ಫರ್ಗ್ಯೂಸನ್ ಮತ್ತು ಪ್ರಸಿಧ್ ಕೃಷ್ಣ ಜೊತೆಯಾಗಿದ್ದು ಆರ್ಸಿಬಿಯನ್ನು ಕಂಗಾಲಾಗಿಸಿತ್ತು. ಅಬುಧಾಭಿ ಮೈದಾನದಲ್ಲಿ ಆರ್ಸಿಬಿ ಕೆಕೆಆರ್ ವಿರುದ್ಧ 9 ವಿಕೆಟ್ಗಳ ಹೀನಾಯ ಸೋಲನುಭಸಿತು.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಆರಂಭಿಸಿತು. ಇನ್ನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಉತ್ತಮ ಆರಂಭ ತರಲಿಲ್ಲ. ಪ್ರಸಿಧ್ ಕೃಷ್ಣ 5 ರನ್ಗಳಿಸದ್ದ ಕೊಹ್ಲಿಯನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ಪಡಿಕಲ್ ಮತ್ತು ಹೊಸ ಶ್ರೀಕರ್ ಭರತ್ ಪವರ್ ಪ್ಲೇನಲ್ಲಿ ಕೊಲ್ಕತ್ತಾ ಬೌಲರ್ಗಳನ್ನು ಬೌಂಡರಿಗೆ ಅಟ್ಟುತ್ತಿದ್ದರು. ಆದರೆ ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಫರ್ಗ್ಯೂಸನ್ 22ರನ್ಗಳಿಸಿದ್ದ ಪಡಿಕಲ್ ವಿಕೆಟ್ ಹಾರಿಸಿದ್ರು. ಮೊದಲ 6 ಓವರುಗಳಲ್ಲಿ ಆರ್ಸಿಬಿ 41 ರನ್ಗಳಿಸಿದ್ರೂ 2 ವಿಕೆಟ್ ಕಳೆದುಕೊಂಡಿತ್ತು.
ಶ್ರೀಕರ್ ಭರತ್, ಮ್ಯಾಕ್ಸ್ವೆಲ್ ಜೊತೆ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದ್ರು. ಆದ್ರೆ ದಾಳಿಗಿಳಿದ ಆಂಡ್ರೆ ರಸೆಲ್ 16 ರನ್ಗಳಿಸಿದ್ದ ಭರತ್ ವಿಕೆಟ್ ಹಾರಿಸಿದ್ರು. ಮುಂದಿನ ಎಸೆತದಲ್ಲೇ ಎಬಿಡಿ ವಿಲಿಯರ್ಸ್ ಕ್ಲೀನ್ ಬೌಲ್ಡ್ ಆಗಿದ್ದು ಆರ್ಸಿಬಿ ವಿಶ್ವಾಸಕ್ಕೆ ಆಘಾತ ನೀಡಿತ್ತು. ಇಲ್ಲಿಂದ ಮುಂದೆ ವರುಣ್ ಚಕ್ರವರ್ತಿ ಮ್ಯಾಜಿಕ್ ಆರಂಭವಾಯಿತು. ಮೊದಲಿಗೆ 10ರನ್ಗಳಿಸಿದ್ದ ಮ್ಯಾಕ್ಸ್ವೆಲ್ ರನ್ನು ಬೌಲ್ಡ್ ಮಾಡಿದ್ರೆ, ಮುಂದಿನ ಎಸೆತದಲ್ಲೇ ಹಸರಂಗ ಶೂನ್ಯ ಸುತ್ತಿದ್ರು. ಸಚಿನ್ ಬೇಬಿ ಕೂಡ ವರುಣ್ಗೆ 3ನೇ ಬಲಿಯಾದ್ರು. ಜೇಮಿಸನ್, ಹರ್ಷಲ್ ಪಟೇಲ್, ಸಿರಾಜ್ ಆಟವೂ ನಡೆಯಲಿಲ್ಲ. ಆರ್ಸಿಬಿ 19 ಓವರುಗಳಲ್ಲಿ 92ರನ್ಗಳಿಗೆ ಆಲೌಟ್ ಆಯಿತು. ವರುಣ್ ಚಕ್ರವರ್ತಿ 13 ರನ್ಗೆ 3 ವಿಕೆಟ್ ಪಡೆದ್ರೆ, ರಸೆಲ್ ಕೇವಲ 9 ರನ್ಗೆ 3 ವಿಕೆಟ್ ಪಡೆದು ಮಿಂಚಿದ್ರು.
ಗುರಿ ಬೆನ್ನಟ್ಟಿದ ಕೆಕೆಆರ್ ಅಬ್ಬರದ ಆರಂಭ ಕಂಡಿತು. ಶುಭ್ಮನ್ ಗಿಲ್ ಮತ್ತು ಹೊಸಬ ವೆಂಕಟೇಶ್ ಅಯ್ಯರ್ ಆರ್ಸಿಬಿ ಬೌಲರ್ಗಳ ಬೆವರಿಳಿಸಿದ್ರು. ಪವರ್ ಪ್ಲೇನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಗಿಲ್ ಮತ್ತು ಅಯ್ಯರ್ ಒಬ್ಬರಿಗೊಬ್ಬರು ಕಾಂಪಿಟೇಷನ್ನಲ್ಲಿ ಆಡುವಂತೆ ಆಡಿದ್ರು. ಮೊದಲ ವಿಕೆಟ್ಗೆ ಈ ಜೋಡಿ ಸೇರಿಸಿದ್ದು ಬರೊಬ್ಬರಿ 82 ರನ್.
34 ಎಸೆತಗಳಲ್ಲಿ 6 ಫೋರ್ , 1ಸಿಕ್ಸರ್ ಸಿಡಿಸಿದ ಗಿಲ್ ಚಹಲ್ಗೆ ವಿಕೆಟ್ ಒಪ್ಪಿಸಿದ್ರು. ಅಯ್ಯರ್ 27 ಎಸೆತಗಳಲ್ಲಿ 7 ಫೋರ್ ಮತ್ತು 1 ಸಿಕ್ಸರ್ ಸಿಡಿಸಿ ಅಜೇಯ 41 ರನ್ಗಳಿಸಿದ್ರು. ಕೊಲ್ಕತ್ತಾ ಕೇವಲ 10 ಓವರ್ಗಳಲ್ಲಿ 94 ರನ್ಗಳಿಸಿ ಗುರಿ ಮುಟ್ಟಿದ ಕೆಕೆಆರ್ ನೆಟ್ ರನ್ ರೇಟ್ ಹೆಚ್ಚಿಸಿಕೊಂಡಿತ್ತಲ್ಲದೆ ಆರ್ಸಿಬಿ ರನ್ರೇಟ್ ಸ್ಥಿತಿಯನ್ನು ಕಂಗಾಲಾಗಿಸಿತು.









