ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್ ನ ರನ್ ರಾಕ್ಷಸ.. ಟೀಂ ಇಂಡಿಯಾ ಕೋಟೆಯ ಅಧಿಪತಿ.. ಏಕದಿನ ಕ್ರಿಕೆಟ್ ನ ಆಧುನಿಕ ಸುಲ್ತಾನ.. ಪ್ರತಿ ಪಂದ್ಯದಲ್ಲೂ ರನ್ ಸುನಾಮಿ ಎಬ್ಬಿಸುವ ಪ್ರಳಯಾಂತಕ. ಸದ್ಯ ವಿರಾಟ್ ಕೊಹ್ಲಿಯ ಬ್ಯಾಟ್ ಸದ್ದು ಮಾಡದೇ ಇರಬಹುದು. ಆದ್ರೆ ಕೊಹ್ಲಿಗಿರುವ ಚರಿಷ್ಮಾ ಮಾತ್ರ ಕಡಿಮೆ ಆಗಿಲ್ಲ, ಆಗೋದು ಇಲ್ಲ. ಈ ಒಂಟಿ ಸಲಗನ ಓಟವೇ ಅಂತಹದ್ದು. ಮೈದಾನದಲ್ಲಿ ಎದುರಾಳಿಗಳ ಬೆಂಡೆತ್ತಿ ಸಿಂಹದಂತೆ ಘರ್ಜಿಸುತ್ತಾ ಪಂದ್ಯವನ್ನು ಗೆಲ್ಲಿಸಿಕೊಡುವ ಆಟಕ್ಕೆ ಸಲಾಂ ಹೇಳಲೇಬೇಕು. ಒಂದು ಮಾತಿನಲ್ಲಿ ಹೇಳಬೇಕೆಂದರೆ ವಿರಾಟ್ ಟೀಂ ಇಂಡಿಯಾ ಗರ್ಭಗುಡಿಯ ದೇವರು.
ವಿರಾಟ್ ತನ್ನ ವಿಧ್ವಂಸಕ ಬ್ಯಾಟಿಂಗ್ ನಿಂದಲೇ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹಾಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೀಗ ಮತ್ತೆ ವಿರಾಟ್, ಸಚಿನ್ ರ ಮತ್ತೊಂದು ದಾಖಲೆಯನ್ನು ಮುರಿಯಲು ಸಿದ್ಧರಾಗಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಮಿಂಚುತ್ತಿರುವ ಕೊಹ್ಲಿ ಮುಂದಿರುವುದು ಸಚಿನ್ ತೆಂಡೂಲ್ಕರ್ ಮಾಡಿಟ್ಟಿರುವ ಸರ್ವಕಾಲಿಕ ದಾಖಲೆಗಳ ಸರಮಾಲೆ. ಇದನ್ನೇ ಟಾರ್ಗೆಟ್ ಮಾಡಿದಂತೆ ಬ್ಯಾಟಿಂಗ್ ಮಾಡುತ್ತಿರುವ ರನ್ ಮಿಷಿನ್ ಇದೀಗ ಹೊಸತೊಂದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ವಿಶ್ವ ದಾಖಲೆಗೆ ಬೇಕು 133 ರನ್!
ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದಲ್ಲಿ 12 ಸಾವಿರ ರನ್ ಪೂರೈಸಿದ ಆಟಗಾರನೆಂಬ ವಿಶ್ವ ದಾಖಲೆ ಶೀಘ್ರದಲ್ಲೇ ವಿರಾಟ್ ಕೊಹ್ಲಿ ಪಾಲಾಗಲಿದೆ. ಇಂತಹದೊಂದು ಸಾಧನೆ ಮಾಡಲು ಕೊಹ್ಲಿಗೆ ಕೇವಲ 133 ರನ್ ಗಳ ಅವಶ್ಯಕತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದು, ಇದೇ ಸರಣಿಯಲ್ಲಿ ನೂತನ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.
ಈ ಹಿಂದೆ ಸಚಿನ್ ತೆಂಡೂಲ್ಕರ್ 12 ಸಾವಿರ ರನ್ ಪೂರೈಸಲು 300 ಇನಿಂಗ್ಸ್ ಆಡಿದ್ದರು. ಆದರೆ ಕೊಹ್ಲಿ ಈಗಾಗಲೇ 239 ಇನ್ನಿಂಗ್ಸ್ ಗಳಲ್ಲಿ 11867 ರನ್ ಪೇರಿಸಿದ್ದಾರೆ. ಇನ್ನು ಬೇಕಿರುವುದು 133 ರನ್ ಗಳು ಮಾತ್ರ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಈ ದಾಖಲೆಯನ್ನು ಕೊಹ್ಲಿ ಮುರಿಯುವ ಸಾಧ್ಯತೆ ಹೆಚ್ಚಿದೆ.
ಸರ್ವಶ್ರೇಷ್ಠ ದಾಖಲೆ ಆಗುತ್ತಾ ಉಡೀಸ್?
ಏಕದಿನ ಕ್ರಿಕೆಟ್ನಲ್ಲಿ 43 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿಗೆ ಸಚಿನ್ ಅವರ ಸರ್ವಶ್ರೇಷ್ಠ ದಾಖಲೆ ಮುರಿಯಲು ಬೇಕಿರುವುದು ಕೇವಲ 7 ಶತಕಗಳು ಮಾತ್ರ. 463 ಏಕದಿನ ಪಂದ್ಯಗಳನ್ನು ಆಡಿರುವ ಸಚಿನ್ 49 ಶತಕಗಳನ್ನು ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 248 ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಸಿಡಿಸಿದ್ದಾರೆ.








