ಕೋಲ್ಕತ್ತಾ: ಜನರಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ಕಿರಿಯ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಈ ಕುರಿತು ಹೇಳಿದ್ದಾರೆ. ರಾಜ್ಯದ ಉನ್ನತ ಹುದ್ದೆಗೆ (ಸಿಎಂ ಸ್ಥಾನ) ನಾನು ಆಕರ್ಷಿತಳಾಗಿಲ್ಲ. ಜನರ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.
ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮಾತುಕತೆಗೆ ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ವೈದ್ಯರಿಗೆ ಭರವಸೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧದ ಸಂದೇಶಗಳು ಹರಿದಾಡುತ್ತಿರುವುದನ್ನು ಖಂಡಿಸಿದ ಸಿಎಂ, ನಮ್ಮ ಸರ್ಕಾರವನ್ನು ಅವಮಾನಿಸಲು ಹಲವರು ಈ ರೀತಿ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿಯೂ ರಾಜಕೀಯ ಸೇರಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದಿರುವ ವ್ಯಕ್ತಿಗಳಿಗೆ ಯಾವುದೇ ನ್ಯಾಯ ಬೇಕಿಲ್ಲ. ಅವರಿಗೆ ಕುರ್ಚಿ ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಜನರಿಗಾಗಿ ಕುರ್ಚಿ ಬಿಟ್ಟು ಕೊಡಲು ಸಿದ್ಧ ಎಂದಿದ್ದಾರೆ.