ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಸದ್ಯ ಕ್ರಿಕೆಟ್, ಫುಟ್ಬಾಲ್ ಕ್ಕಿಂತ ಹೆಚ್ಚು ಮುಖ್ಯವಾಗಿರುವ ಸಂಗತಿಗಳೆಂದರೆ ಶಾಲೆ ಹಾಗೂ ಕಾಲೇಜುಗಳು. ಇವುಗಳ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ನಾವು ವಿಶಾಲ ಮನೋಭಾವದಿಂದ ಯೋಚಿಸಬೇಕಿದೆ. ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಬೇಕಿಲ್ಲ. ಶಾಲಾ- ಕಾಲೇಜುಗಳಿಗೆ ಹೋಗಲಾಗದ ಮಕ್ಕಳ ಬಗ್ಗೆ ಹೆಚ್ಚು ಚಿಂತಿತನಾಗಿದ್ದೇನೆ. ಏಕೆಂದರೆ ಅವರು ನಮ್ಮ ಭವಿಷ್ಯದ ಪೀಳಿಗೆಗಳು. ಆದ್ದರಿಂದ ಶಾಲೆ-ಕಾಲೇಜುಗಳು ಮೊದಲು ಶುರುವಾಗಬೇಕು. ಕ್ರಿಕೆಟ್ ಹಾಗೂ ಫುಟ್ಬಾಲ್ ನಂತರ ಹೇಗೋ ನಡೆಯುತ್ತವೆ ಎಂದಿದ್ದಾರೆ.
ಇನ್ನು ನಿಧಿ ಸಂಗ್ರಹಕ್ಕೆ ಇಂಡೋ ಪಾಕ್ ಕ್ರಿಕೆಟ್ ಪಂದ್ಯ ನಡೆಸೋ ಬಗ್ಗೆ ಮಾತನಾಡಿದ ಕಪಿಲ್, ಭಾರತ- ಪಾಕಿಸ್ತಾನ್ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿ ಎಂದು ನಾವು ಭಾವನಾತ್ಮಕವಾಗಿ ಸ್ಪಂದಿಸಬಹುದು. ಆದರೆ, ಈಗಿನ ತುರ್ತು ಅದಲ್ಲ. ನಿಮಗೆ ಹಣ ಬೇಕೆಂದರೆ ಗಡಿಯಲ್ಲಿನ ಚಟುವಟಿಕೆಗಳನ್ನು ನಿಲ್ಲಿಸಿ. ಅಲ್ಲಿ ವೆಚ್ಚ ಮಾಡುವ ಹಣದಿಂದ ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸಿ. ಇನ್ನೂ ಹಣ ಬೇಕೆಂದಾದರೆ, ಧಾರ್ಮಿಕ ಸಂಸ್ಥೆಗಳಿಂದ ಪಡೆಯಲಿ. ಧಾರ್ಮಿಕ ಸಂಸ್ಥೆಗಳಿಗೂ ಹೊಣೆಗಾರಿಕೆ ಇದೆ. ಭಕ್ತರು ನೀಡಿದ ಹಣವನ್ನು ಸಮಾಜದ ಉದ್ಧಾರಕ್ಕಾಗಿ ನೀಡಲಿ. ಸರ್ಕಾರಕ್ಕೆ ನೆರವಾಗಲಿ ಎಂದು ಸಲಹೆ ನೀಡಿದ್ದಾರೆ ಕಪಿಲ್ ದೇವ್.