ಖ್ಯಾತ ರೇಡಿಯೋ ನಿರೂಪಕಿ ಆರ್ ಜೆ ರಚನಾ ನಿಧನ Saaksha Tv
ಬೆಂಗಳೂರು: ಖ್ಯಾತ ರೇಡಿಯೋ ನಿರೂಪಕಿ ಆರ್ ಜೆ ರಚನಾ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
39 ವರ್ಷದ ಆರ್ ಜೆ ರಚನಾ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ರಚನಾ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ.
ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಸೇರಿದಂತೆ ಹಲವು ರೇಡಿಯೋ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ಅವರು, ತಮ್ಮದೇ ವಿಶೇಷ ಶೈಲಿಯ ಮಾತಿನಿಂದ ಅಪಾರ ಕೇಳುಗರನ್ನು ಪಡೆದಿದ್ದರು. ಹಾಗಾಗಿ ರಚನಾ ಕಾರ್ಯಕ್ರಮಗಳನ್ನು ಕೇಳಲು ಕೇಳುಗರ ವರ್ಗವೇ ಸೃಷ್ಟಿಯಾಗಿತ್ತು. ಅದರಲ್ಲೂ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ರಚನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಲ್ಲುತ್ತಿದ್ದರು.
ರಚನಾ ನಡೆಸಿಕೊಡುತ್ತಿದ್ದ ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗಿದ್ದವು. ರಚನಾ ರೇಡಿಯೋ ಜಾಕಿ ಕೆಲಸವನ್ನು ಬಿಟ್ಟು ಏಳು ವರ್ಷಗಳು ಆಗಿತ್ತು. ಹಾಗೆಯೇ ಸ್ನೇಹಿತರ ವಲಯದಿಂದಲೂ ದೂರ ಉಳಿದಿದ್ದರು. ರಚನಾ ಅವರು ತುಂಬಾನೇ ಡಿಪ್ರೆಷನ್‌ನಲ್ಲಿ ಇದ್ದರು. ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಿದೆ ರಚನಾ ಸ್ನೇಹಿತರ ಬಳಗ. ಹಾಗೆ ಖಿನ್ನತೆಯಿಂದ ಏನಾದರು ಹೆಚ್ಚು ಕಡಿಮೆ ಆಗಿರಬೇಕು ಅಂತಾ ಶಂಕಿಸಿದ್ದಾರೆ.
ಕಿರಿವಯಸ್ಸಿನಲ್ಲೇ ರಚನಾ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ರಚನಾ ಸಾವಿಗೆ ಆಪ್ತರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.









