ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಈಗಾಗಲೇ ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಿಕ್ಕಣ್ಣಗೂ (Chikkanna) ಸಂಕಷ್ಟ ಶುರುವಾಗಿದೆ.
ದರ್ಶನ್ (Darshan) ಮತ್ತು ಗ್ಯಾಂಗ್ ಸದಸ್ಯರ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಜಡ್ಜ್ ಎದುರು ಈಗಾಗಲೇ ಹೇಳಿಕೆ ದಾಖಲಿಸಿದ್ದಾರೆ. ಆನಂತರ ಅವರು ದರ್ಶನ್ ರನ್ನು ಭೇಟಿ ಮಾಡಿದ್ದರು. ಆದರೆ, ತನಿಖಾ ಹಂತದಲ್ಲಿದ್ದಾಗ ಸಾಕ್ಷಿಯಾಗಿರು ವ್ಯಕ್ತಿ ಜೈಲಿನಲ್ಲಿ (Jail) ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಆದರೆ ಚಿಕ್ಕಣ್ಣ, ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಚಿಕ್ಕಣ್ಣಗೆ ಎಸ್ ಐಟಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ.
ನೋಟಿಸ್ ನೊಂದಿಗೆ ಜೈಲಾಧಿಕಾರಿಗಳಿಂದಲೂ ಮಾಹಿತಿ ಪಡೆಯಬಹುದು. ಸಾಕ್ಷಿಗಳ ಭೇಟಿಯನ್ನ ತಡೆಯಲು ನ್ಯಾಯಾಲಯದಲ್ಲಿ ಎಸ್‌ಐಟಿ ಮನವಿ ಮಾಡುವ ಸಾಧ್ಯತೆಯಿದೆ. ಜೂನ್ 8 ರಂದು ಸ್ಟೋನಿ ಬ್ರೂಕ್ ಪಬ್ ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು. ಪಾರ್ಟಿ ನಂತರವೇ ಈ ಎಲ್ಲ ಘಟನೆಗಳು ನಡೆದಿದ್ದವು. ಈಗಾಗಲೇ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಸಿಆರ್‌ಪಿಸಿ (CrPC) 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ದಾಖಲಿಸಿದ್ದಾರೆ.








