ರಾಹುಲ್ ಗಾಂಧಿ ಮೇಲೆ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗಳು ಗರಂ

ಹೊಸದಿಲ್ಲಿ, ಜೂನ್ 11: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ-ಚೀನಾ ಗಡಿ ವಿವಾದದ ಬಗ್ಗೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಗರಂ ಆಗಿದ್ದಾರೆ.
ರಾಹುಲ್ ಗಾಂಧಿ ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಲಡಾಖ್‌ನಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಯೇ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಇದೀಗ ರಾಹುಲ್ ಗಾಂಧಿಯವರ ಟ್ವೀಟ್ ಗಳನ್ನು ಖಂಡಿಸಿರುವ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ರಾಹುಲ್ ಗಾಂಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿಯವರ ಟ್ವೀಟ್ ಗಳು ಭಾರತ-ಚೀನಾ ಗಡಿ ವಿವಾದದ ಬಗೆಗಿರುವ ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತಿದೆ ಎಂದು ಕಿಡಿಕಾರಿರುವ ಮಾಜಿ ಸೇನಾಧಿಕಾರಿಗಳು ಇದು ಜವಾಹರ್ ಲಾಲ್ ನೆಹರು ಕಾಲದಲ್ಲಿ ನಡೆದ ಪ್ರಮಾದಗಳನ್ನು ನಿರ್ಲಕ್ಷಿಸುವಂತೆ ಮಾಡುವ ಪ್ರಯತ್ನವಾಗಿರಬಹುದು ಎಂದು ಲೆಫ್ಟಿನೆಂಟ್ ಜನರಲ್ ನಿತಿನ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ ಆರ್.ಎನ್. ಸಿಂಗ್ ಮತ್ತು ಮೇಜ್ ಜನರಲ್ ಎಂ ಶ್ರೀವಾಸ್ತವ ಸೇರಿದಂತೆ ಒಂಭತ್ತು ಮಂದಿ ನಿವೃತ್ತ ಸೇನಾಧಿಕಾರಿಗಳು ಪ್ರಕಟಣೆ ಮೂಲಕ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಖಂಡಿಸಿದ್ದಾರೆ.
ಭಾರತೀಯ ಸೇನೆ ಉಗ್ರರ ಮೇಲೆ ನಡೆಸಿದ್ದ ಹಲವು ದಾಳಿಗಳನ್ನು ರಾಹುಲ್ ಗಾಂಧಿ ಈ ಮೊದಲು ಪ್ರಶ್ನಿಸಿದ್ದಾರೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದದ್ದು ಎಂದಿರುವ ಮಾಜಿ ಸೇನಾಧಿಕಾರಿಗಳು ಗಡಿ ವಿಚಾರದಲ್ಲಿ ಭಾರತ ಸರ್ಕಾರ ಸೂಕ್ತ ರೀತಿಯಲ್ಲಿ, ರಾಜತಾಂತ್ರಿಕವಾಗಿ ವ್ಯವಹರಿಸುತ್ತಿದೆ. ನಮ್ಮ ದೇಶದ ಗಡಿಗಳನ್ನು ಸಂರಕ್ಷಿಸುವಲ್ಲಿ ಸಶಸ್ತ್ರ ಪಡೆಗಳನ್ನು ಬೆಂಬಲಿಸುತ್ತಿದೆ. ಆದರೆ ರಾಹುಲ್ ಗಾಂಧಿಯವರು ತಮ್ಮ ತಾತ ನೆಹರು ಕಾಲದಲ್ಲಿ ಟಿಬೆಟ್ ಅನ್ನು ಚೀನಾಕ್ಕೆ ಹಸ್ತಾಂತರಿಸಿದರ ಬಗ್ಗೆ ತಿಳಿದಂತೆ ತೋರುತ್ತಿಲ್ಲ. ಚೀನಾ ಅಕ್ಸಾಯ್ ಚಿನ್ ಮೂಲಕ ರಸ್ತೆಗಳನ್ನು ನಿರ್ಮಿಸಿದಾಗ ನೆಹರು ಅದನ್ನು ವಿರೋಧಿಸಿರಲಿಲ್ಲ. ಹಾಗಾಗಿ ಇಡೀ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿತು. ಈ ಬಗ್ಗೆ ಮೊದಲು ರಾಹುಲ್ ಗಾಂಧಿ ತಿಳಿದುಕೊಳ್ಳುವುದು ಒಳ್ಳೆಯದು ಎಂದು ನಿವೃತ್ತ ಸೇನಾಧಿಕಾರಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ








