ಚಿರಪರಿಚಿತ “ರಿಷಬ್ ಪಂತ್” ಅಪರಿಚಿತನಾಗಿಬಿಟ್ನಾ..?
ಈ ತರುಣನ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು. ಸುಮಾರು ಆರೇಳು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಸಾಕಷ್ಟು ಭರವಸೆ ಮೂಡಿಸಿದ್ದ. ಹೊಡಿಬಡಿ ಆಟದ ಜೊತೆಗ ಎದ್ದೋಬಿದ್ದೋ ಬ್ಯಾಟಿಂಗ್ ಮಾಡುತ್ತಿದ್ದ ಈತ ಟೀಮ್ ಇಂಡಿಯಾದ ಫೈಂiÀiರ್ ಬ್ರಾಂಡ್ ಪ್ಲೇಯರ್ ಅಂತನೇ ಬಿಂಬಿಸಲಾಗಿತ್ತು. ತಾಂತ್ರಿಕತೆಗಿಂತಲೂ ಪವರ್ ಹಿಟ್ ಮೂಲಕವೇ ರನ್ ವೇಗ ಹೆಚ್ಚಿಸುತ್ತಿದ್ದ ಈತನನ್ನು ಸ್ಪೈಡರ್ ಮ್ಯಾನ್ ಅಂತ ಕೂಡ ಕರೆಯಲಾಗುತ್ತಿತ್ತು.
ಮುಖ್ಯವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ಹೊಡಿ ಬಡಿ ಆಟದ ಮೂಲಕವೇ ಆಸೀಸ್ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಜಯ ತಂದು ಕೊಟ್ಟ ಹುಡುಗ ಅಪಘಾತದಲ್ಲಿ ಬದುಕಿ ಬಂದಿದ್ದೇ ಪವಾಡ. ಗಂಭೀರ ಗಾಯದ ಜೊತೆಗೆ ಕಣ್ಣೇದುರೇ ಹೊತ್ತಿ ಉರಿಯುತ್ತಿದ್ದ ಕಾರಿನಲ್ಲಿ ಬಚಾವ್ ಆಗಿದ್ದು ವಿಸ್ಮಯವೇ ಸರಿ. ಇನ್ನೇನು ಆತನ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅಂದುಕೊಂಡಿದ್ದವರ ಎದುರಿನಲ್ಲೇ ಫಿನಿಕ್ಸ್‍ನಂತೆ ಮೇಲೆದ್ದು ಬಂದ ರೀತಿಯೇ ಅದ್ಭುತ. ಕೈ ಕಾಲಿಗೆ ರಾಡ್ ಹಾಕೊಂಡು, ಕುಂಟುತ್ತಾ, ನಿಧಾನವಾಗಿ ಹೆಜ್ಜೆಯನ್ನಿಟ್ಟಿದ್ದು ಕೂಡ ಮೈದಾನದಲ್ಲಿ. ತಾನು ಇಷ್ಟಪಟ್ಟು, ಕಷ್ಟಪಟ್ಟು ತನ್ನ ಉಸಿರೇ ಕ್ರಿಕೆಟ್ ಅಂತ ನಂಬಿಕೊಂಡಿದ್ದ ಈತ ಮತ್ತೆ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಕ್ರಿಕೆಟ್ ಜಗತ್ತು ಅಚ್ಚರಿಯಿಂದ ನೋಡಿತ್ತು. ತನಗೆ ಅಪಘಾತವಾಗಿದೆ.. ಆದ್ರೂ ತನಗೆ ಏನು ಆಗಿಲ್ಲ ಎಂಬ ರೀತಿಯಲ್ಲಿ ಆಡುತ್ತಿದ್ದ ಈತ ಮತ್ತೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 11ರ ಬಳಗದಲ್ಲಿ ಆಡಲು ಅವಕಾಶ ಸಿಗದಿದ್ರೂ ಇಂದಿಗೂ ಈತ ಜಾಹಿರಾತು ಲೋಕದ ಕಣ್ಮನಿ ಎಂಬುದರಲ್ಲಿ ಎರಡು ಮಾತಿಲ್ಲ.
ಅಷ್ಟೇ ಅಲ್ಲ, ಈ ಬಾರಿಯ ಐಪಿಎಲ್‍ನಲ್ಲಿ ಈತನನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಅಬ್ಬಾ.. ಕೋಟಿ ಕೋಟಿ ಲೆಕ್ಕದಲ್ಲಿ ಹರಾಜು ಕೂಗುತ್ತಿದ್ದ ಫ್ರಾಂಚೈಸಿಗಳು ಜಿದ್ದಿಗೆ ಬಿದ್ದವರಂತೆ ಈ ಆಟಗಾರರನ್ನು ತನ್ನ ತೆಕ್ಕೆಗೆ ಬೀಳಿಸಲು ಪ್ರಯತ್ನ ನಡೆಸಿದ್ದವು. ಕೊನೆಗೂ ಐತಿಹಾಸಿಕ ದಾಖಲೆಯ 27ಕೋಟಿಗೆ ಲಕ್ನೋ ಫ್ರಾಂಚೈಸಿ ಈತನನ್ನು ತನ್ನ ಬಲೆಯೊಳಗೆ ಬೀಳಿಸಿಕೊಂಡಿತ್ತು.
ಆದ್ರೆ ಲೆಕ್ನೋ ಫ್ರಾಂಚೈಸಿ ಖರೀದಿ ಮಾಡಿರುವುದು ಸ್ವತಃ ಆತನಿಗೆ ಇಷ್ಟ ಇರಲಿಲ್ಲ. ತಂಡದೊಳಗೆ ಫ್ರಾಂಚೈಸಿ ಮಾಲೀಕರ ಕೈವಾಡ ಜಾಸ್ತಿ ಇರುತ್ತೆ ಎಂಬುದು ಆತನಿಗೂ ಗೊತ್ತಿರದ ವಿಚಾರವೇನು ಅಲ್ಲ. ಈ ಹಿಂದೆ ಕೆ.ಎಲ್. ರಾಹುಲ್‍ಗೆ ಫ್ರಾಂಚೈಸಿ ಮಾಲೀಕ ಏನು ಮಾಡಿದ್ದರು ಎಂಬುದು ಆತನಿಗೂ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿ ತನಗೆ ತಂಡದಲ್ಲಿ ಹೆಚ್ಚು ಫ್ರೀಡಂ ಇರಲ್ಲ ಎಂಬುದು ಮೊದಲೇ ಗೊತ್ತಿತ್ತು. ಈ ಮನಸ್ಥಿತಿಯಲ್ಲಿ ಆತ ಐಪಿಎಲ್‍ನಲ್ಲಿ ಆಡಬೇಕಾದ ಪರಿಸ್ಥಿತಿ ಇತ್ತು.
ಇತ್ತ ಐಪಿಎಲ್‍ನ ದುಬಾರಿ ಪ್ಲೇಯರ್ ಎಂಬ ಪಟ್ಟ…ಆತ್ತ ಫ್ರಾಂಚೈಸಿಯ ಅತೀಯಾದ ನಿರೀಕ್ಷೆ…. ಇನ್ನೊಂದೆಡೆ ಕೈಕೊಟ್ಟ ಫಾರ್ಮ್.. ತಂಡದ ಸಂಘಟಿತ ಆಟದ ವೈಫಲ್ಯ.. ನಾಯಕತ್ವದಲ್ಲಿನ ಕೆಲವೊಂದು ಎಡವಟ್ಟುಗಳು.. ತಂಡದ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇಲ್ಲದೇ ಇರುವುದರಿಂದ ಈತ ತನ್ನ ಐಪಿಎಲ್ ಕೆರಿಯರ್‍ನಲ್ಲೇ ಕೆಟ್ಟ ಪ್ರದರ್ಶನವನ್ನು ನೀಡಬೇಕಾಯ್ತು. ಕಳೆದ ಹತ್ತು ಪಂದ್ಯಗಳಲ್ಲಿ ಸರಾಸರಿ 12.80ರಂತೆ, 98.47 ಸ್ಟ್ರೈಕ್ ರೇಟ್‍ನಲ್ಲಿ ಕೇವಲ 128 ರನ್ ದಾಖಲಿಸಿದ್ದಾನೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿದೆ. ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ 25ಕ್ಕಿಂತ ಕಮ್ಮಿ ರನ್ ಹೊಡೆದಿದ್ದಾನೆ. ಹೀಗಾಗಿ ಈ ಬಾರಿಯ ಐಪಿಎಲ್‍ನ ದುಬಾರಿ ಪ್ಲೇಯರ್ ವಸ್ರ್ಟ್ ಪ್ಲೇಯರ್ ಎಂಬ ಕಳಂಕ ಬಂದಿದೆ. ಅಷ್ಟೇ ಅಲ್ಲ ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ನಲಿದಾಡುತ್ತಿದ್ದ ರಿಷಬ್ ಪಂತ್ ಎಂಬ ಹೆಸರು ಅಪರಿಚಿತವಾಗಿದೆ.
ಸನತ್ ರೈ








