ರಿಷಬ್ ಪಂತ್.. ದೆಹಲಿ ಕ್ರಿಕೆಟ್ ಕೊಟ್ಟ ಮೂರನೆಯ ಸೂಪರ್ ಸ್ಟಾರ್.. ಅನಾಹುತಕಾರಿ ಅಪಘಾತದ ಭೀಕರ ಕರಾಳ ಅನುಭವದ ದುಸ್ವಪ್ನವನ್ನು ಮೀರಿ ಗೆದ್ದ ಅಗ್ನಿ ದಿವ್ಯ.. ಸದ್ಯ ಟೀಮ್ ಇಂಡಿಯಾದ ಸೂಪರ್ ಮ್ಯಾನ್.. ಅಂಗಳದಲ್ಲಿ, ಡ್ರೆಸ್ಸಿಂಗ್ ಕೋಣೆಯಲ್ಲಿ, ಹಾಗೂ ಕ್ರಿಕೆಟ್ ಹೊರಗೆ ಗೌರವ ಕಾಪಾಡಿಕೊಂಡ ಸರಳ ಸಭ್ಯ ಸಜ್ಜನ ಸೌಮ್ಯ ಜೀವಿ.. ವಿಕೆಟ್ ಹಿಂದೆ ಮತ್ತು ವಿಕೆಟ್ ಮುಂದೆ ಎರಡೂ ಕಡೆಯೂ ಸದಾ ಅಲರ್ಟ್ ಆಗಿ ನಿಲ್ಲುವ ಬದ್ಧತೆಯ ಕ್ರಿಕೆಟಿಗ ಈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷು..
ಆಟದಷ್ಟೇ ಹಾಸ್ಯ ಪ್ರವೃತ್ತಿ ಯಿಂದಲೂ ಮನೆ ಮಾತಾಗಿರೋ ಕ್ರಿಕೆಟಿಗ ರಿಷಬ್. ಕೈ ಕಾಲುಗಳಲ್ಲಿ ರಾಡ್ ಹಾಕೊಂಡು ಮೈದಾನಲ್ಲಿ ಸ್ಪ್ರಿಂಗ್ ನಂತೆ ಕುಣಿಯುತ್ತ ಪಂತ್ ಕ್ರಿಕೆಟ್ ಆಟ ಆಡೋದನ್ನು ನೋಡೋವುದೇ ಒಂದು ಚೆಂದ. ಅದೊಂದು ಭಯಾನಕ ಅಪಘಾತದ ನಂತರ ರಿಷಬ್ ಪಂತ್ ಗೆ ಚೇತರಿಸಿಕೊಂಡು ಮತ್ತೆ ಪಿಂಚ್ ಗೆ ಇಳಿದ ಪರಿ ಇದೆಯಲ್ಲ, ಅದನ್ನು ಯಾರೂ ಊಹಿಸಿಕೊಳ್ಳುವುದೂ ಕಷ್ಟ. ಆದರೆ ರಿಷಬ್ ಪಂತ್ ನ ವಿಲ್ ಪವರ್, ಕ್ರಿಕೆಟ್ ಆಟದ ಕುರಿತಾದ ಅಗಾಧ ಪ್ರೀತಿ ಮತ್ತು ಏನಾದರೂ ಸಾಧಿಸಿಯೇ ತೀರಬೇಕೆನ್ನುವ ಉತ್ಕಟ ಹಂಬಲದ ಪರಿಣಾಮವೇ ಮತ್ತೆ ಬದುಕಲ್ಲಿ ಹಾಗೂ ಇಂಡಿಯನ್ ಕ್ರಿಕೆಟ್ ನಲ್ಲಿ ರಿಷಬ್ ಮರು ಜನ್ಮ ಪಡೆದು ಫಿನಿಕ್ಸ್ ನಂತೆ ಬೂದಿಯಿಂದ ಎದ್ದು ಬಂದಿರುವ ಅನೂಹ್ಯ ಘಟನೆ.
ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿರೋ ಫಿಯರ್ ಲೆಸ್ ಕ್ರಿಕೆಟಿಗ ಕ್ರಿಕೆಟ್ ಜಗತ್ತಿನಲ್ಲಿ ಯಾರು ಇಲ್ಲ. ಮುಂದೆ ಬರೋದು ಇಲ್ಲ. ಅಷ್ಟರ ಮಟ್ಟಿಗೆ ರಿಷಬ್ ಈ ಜನರೇಶನ್ ನ ಎವರ್ ಗ್ರೀನ್ ಹೀರೋ. ವಿಕೆಟ್ ಹಿಂದೆ ಗ್ಲೌಸ್ ತೊಟ್ಟ ರಿಷಬ್, ನಿರ್ಭೀತವಾಗಿ ಬ್ಯಾಟ್ ಮಾಡುತ್ತಾ ಕ್ರೀಸ್ ನಲ್ಲಿ ಬೌಲರ್ ಗಳನ್ನು ಚೆಂಡಾಡುವ ರಿಷು ಸದ್ಯಕ್ಕಂತೂ ಅಸಂಖ್ಯ ಕ್ರಿಕೆಟ್ ಪ್ರೇಮಿಗಳ ಫೆವರೇಟ್. ಜಲಾಶಯದ ಗೇಟ್ ತೆರೆದಾಗ ಧುಮ್ಮಿಕ್ಕುವ ಜಲಧಾರೆಯಂತೆ ರಿಷಬ್ ಬ್ಯಾಟ್ ನಿಂದ ವೇಗವಾಗಿ ರನ್ಗಳು ಹರಿದು ಬರ್ತಿದೆ.
ಒಂದಂತೂ ಸತ್ಯ.. ರಿಷಬ್ ಬ್ಯಾಟ್ ಮಾಡುತ್ತಿರುವಾಗ ಯಾವಾಗ ಔಟ್ ಆಗ್ತಾನೆ ಅನ್ನೋ ಆತಂಕ ಅವನ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ. ಆದರೂ ನಾನೇ ಬೇರೆ ನನ್ ಸ್ಟೈಲ್ ಬೇರೆ ಅಂತ ಗಾಢ ಗರ್ವದಿಂದಲೇ ಆಡುವ ಕಲೆಗೆ ಮನ ಸೋಲಲೇ ಬೇಕು.
ಗುರು ದ್ರಾವಿಡ್ ಶಿಷ್ಯ.. ಗಂಗೂಲಿಯ ನೀಲಿಗಣ್ಣಿನ ಹುಡುಗ. ರಿಕಿ ಪಾಂಟಿಂಗ್ ನ ಫೆವರೇಟ್ ಆಟಗಾರ. ವಿರಾಟ್ ರೋಹಿತ್ ಗರಡಿ ಯಲ್ಲಿ ಪಳಗಿರೋ ಡೆಲ್ಲಿಯ ಹೆಬ್ಬುಲಿ ಭವಿಷ್ಯದ ಟೀಮ್ ಇಂಡಿಯಾದ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ವಿಕೆಟ್ ಹಿಂದುಗಡೆ ನಿಂತು ಪಂದ್ಯದ ಗತಿಯನ್ನು ಅರಿತುಕೊಳ್ಳುವ ಸಾಮರ್ಥ್ಯವೂ ಇದೆ. ಸೆಹ್ವಾಗ್ ನಂತೆ ಪಂದ್ಯಕ್ಕೆ ತಿರುವು ನೀಡೋ ಅಬ್ಬರದ ಆಟವೂ ಇದೆ. ಹಾಗೇ ಎದುರಾಳಿ ತಂಡದ ವೀಕ್ ನೆಸ್ ಅನ್ನು ಬೊಟ್ಟು ಮಾಡಿ ತೋರಿಸೋ ಧಮ್ ಕೂಡ ಇದೆ. ತಾನು ಗಳಿಸೋ ಪ್ರತಿ ರನ್ ಕೂಡ ಸುಲಭವಾಗಿ ಬರಬಾರದು. ಅದು ಎದುರಾಳಿ ತಂಡದ ಆಟಗಾರರನ್ನು ಸತಾಯಿಸಿ ಬರಬೇಕು ಅನ್ನೋ ಸಿದ್ಧಾಂತ ರಿಷಬ್ ಪಂತ್ ದು
ಹೌದು.. ರಿಷಬ್ ಪಂತ್ ಆಟ ಕೆಲವರಿಗೆ ಇಷ್ಟ ಆಗದೇ ಇರಬಹುದು. ಆತನನ್ನು ಟೀಕೆಯೂ ಮಾಡಬಹುದು. ಆದ್ರೆ ಒಳ್ಳೆಯ ಮನಸ್ಸಿನ ಹುಡುಗ. ಇರೋದನ್ನು ಇರೋ ಹಾಗೇ ಹೇಳುವ ಕಲ್ಮಶ ಇಲ್ಲದ ಹೃದಯವಂತ. ಸೋಲು ಗೆಲುವುಗಳನ್ನು ಸಮಾನವಾಗಿ ನೋಡುವ ಗುಣವೂ ಇದೆ. ಹಿರಿಯ ಆಟಗಾರರಿಗೆ ಗೌರವ.. ಸಹ ಆಟಗಾರರ ಜೊತೆಗೂ ಉತ್ತಮ ಭಾಂಧವ್ಯ ಹೊಂದಿರೋ ರಿಷಬ್ ಎದುರಾಲಿ ಆಟಗಾರರನ್ನು ನಗು ಮುಖದಿಂದಲೇ ಮಾತನಾಡಿಸೋ ಕಲೆಯನ್ನು ಹೊಂದಿದ್ದಾರೆ. ಆದ್ರೆ ನೆನಪಿರಲಿ.. ಯಶಸ್ಸಿನ ಅಲೆಯಲ್ಲಿ ಮೈಮರೆತ್ರೆ ಅಪಾಯವೂ ಇದೆ. ಹೀಗಾಗಿ ಸ್ಥಿರತೆಯನ್ನು ಕಾಯ್ದು ಕೊಳ್ಳಬೇಕಿದೆ.
ಅವಕಾಶಗಳು ಪದೇ ಪದೆ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಬಾಚಿ ಕೊಂಡು ಮುನ್ನಡೆಯಬೇಕು. ಹಾಗಂತ ದೊಡ್ಡವರ ಬೆಂಬಲ ಇದೆ ಅಂತ ಯಶಸ್ಸಿನ ಅಮಲಿನಲ್ಲಿ ತೇಲಾಡಿದರೆ ಅವನೊಬ್ಬನಿದ್ದ ಅಂತ ಆಗೋದು ಬೇಡ.. ಹುಷಾರಾಗಿರು ರಿಷಬ್.. ಕೀರ್ತಿಶನಿ ಹೆಗಲೇರದೇ ಇರಲಿ, ಅಹಂಕಾರ ನೆತ್ತಿಗೆ ಹತ್ತದಿರಲಿ, ಸಾಮರ್ಥ್ಯ ಎಂದಿಗೂ ಕುಗ್ಗದಿರಲಿ, ನಿನ್ನ ಸರಳ ಸಭ್ಯ ಸಜ್ಜನಿಕೆಯ ಸೌಮ್ಯ ಸ್ನೇಹಮಯಿ ವರ್ತನೆ ಸದಾಕಾಲ ಹೀಗೇ ಉಳಿಯಲಿ.. ಕ್ರಿಕೆಟ್ ಆಟದ ಕಡೆಗಿನ ನಿನ್ನ ಬದ್ಧತೆ, ಕೌಶಲ್ಯ ಮತ್ತು ಹೊಸತನಗಳ ದಾಟಿ ನಿತ್ಯ ನಿರಂತರವಾಗಿ ಉಳಿಯಲಿ.