ಡೆಲ್ಲಿ ಕ್ಯಾಪಿಟಲ್ಸ್ ಗೆ ಯಂಗ್ ಗನ್ ಸಾರಥ್ಯ : ಪಂತ್ ಗೆ ನಾಯಕನ ಪಟ್ಟ
ನವದೆಹಲಿ : ಟೀಂ ಇಂಡಿಯಾದ ಯಂಗ್ ಗನ್ ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಶ್ರೇಯಸ್ ಅಯ್ಯರ್ ಗೆ ಗಾಯದ ಸಮಸ್ಯೆ ಕಾರಣ ಈ ಬಾರಿ ಐಪಿಎಲ್ ನಲ್ಲಿ ಆಡುತ್ತಿಲ್ಲ. ಈ ಹಿನ್ನೆಲೆ ತಂಡದ ಉಪನಾಯಕನಾಗಿದ್ದ ಪಂತ್ ಅವರನ್ನ ಟೀಂ ಮ್ಯಾನೆಜ್ ಮೆಂಟ್ ನಾಯಕನಾಗಿ ನೇಮಕ ಮಾಡಿದೆ.
ಇಂಗ್ಲೆಂಡ್ ಸರಣಿಯಲ್ಲಿ ಇಂಜ್ಯೂರಿಯಾಗಿದ್ದ ಅಯ್ಯರ್ ಈ ಬಾರಿಯ ಐಪಿಎಲ್ ಆಡುವುದು ಅನುಮಾನವಾಗಿತ್ತು. ಇದರಿಂದ ಡೆಲ್ಲಿ ತಂಡಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋ ಕುತೂಹಲ ಎಲ್ಲರನ್ನು ಮನೆ ಮಾಡಿತ್ತು. ಬಹುತೇಕರು ತಂಡದಲ್ಲಿ ಅನುಭವಿಗಳಾಗಿರುವ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಧವನ್ ಮತ್ತು ಸ್ಟೀವ್ ಸ್ಮಿತ್ ರಂತಹ ಆಟಗಾರರನ್ನು ನಾಯಕನಾಗಿ ನೇಮಿಸಬಹುದು ಎಂದಿದ್ದರು. ಆದರೆ ಫ್ರಾಂಚೈಸಿ ಪಂತ್ ಗೆ ಮಣೆ ಹಾಕಿದೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ ಮಾಲೀಕ ಕಿರಣ್ ಕುಮಾರ್, “ಶ್ರೇಯಸ್ ಅಯ್ಯರ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅಯ್ಯರ್ ನಾಯಕತ್ವದಲ್ಲಿ ನಮ್ಮ ತಂಡವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಈ ವರ್ಷ ಅವರನ್ನು ತಂಡ ತುಂಬಾ ಮಿಸ್ ಮಾಡಿಕೊಳ್ಳಲಿದೆ. ಅವರ ಅನುಪಸ್ಥಿತಿಯಲ್ಲಿ ಪಂತ್ ಈ ವರ್ಷ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರು ಕ್ರಿಕೆಟ್ ನಲ್ಲಿ ಬೆಳೆಯಲು ಅದ್ಭುತವಾದ ಅವಕಾಶ. ಈ ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗಲಿ ಎಂದು ನಾನು ಅವರಿಗೆ ಶುಭಕೋರುತ್ತೇನೆ ಎಂದು ಹೇಳಿದ್ದಾರೆ.