ಬೆಳಗಾವಿ: ಕರ್ನಾಟಕದ ನೆರೆ ರಾಜ್ಯಗಳೊಂದಿಗೆ ಬಗೆಹರಿಯದ ನದಿ ನೀರು ಹಂಚಿಕೆ ವಿವಾದಕ್ಕೆ(River water controversy) ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ.
ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ತುರ್ತು ದೂರವಾಣಿ ಕರೆ ಮಾಡಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಳಸಾ ಬಂಡೂರಿ ವಿಚಾರವಾಗಿ ಗೋವಾ ಮಾಡುತ್ತಿರುವ ವಾದ ಅತಾರ್ಕಿಕ ಎಂದು ರಮೇಶ್ ಜಾರಕಿಹೊಳಿ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ(River water controversy) ಸೀಮಾಂಧ್ರ-ತೆಲಂಗಾಣ ನಡುವಿನ ಸಮಸ್ಯೆಗೆ ಕರ್ನಾಟಕವನ್ನು ಹೊಣೆ ಮಾಡಬೇಡಿ ಎಂದು ಸ್ಪಷ್ಟನೆ ನಿಡಿದ ಜಾರಕಿಹೊಳಿ, ಹೊಸ ನ್ಯಾಯಾಧಿಕರಣ ಸ್ಥಾಪನೆ ಬೇಡಿಕೆ ಸಮರ್ಥನೀಯವಲ್ಲ ಎಂದು ಕರ್ನಾಟಕದ ವಾದವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಕರ್ನಾಟಕದ ಪಾಲಿನ ನೀರನ್ನು ನ್ಯಾಯಯುತವಾಗಿ ಪಡೆದಿದ್ದೇವೆ. ನಮ್ಮ ಹಕ್ಕಿನ ನೀರನ್ನು ವ್ಯರ್ಥ ಮಾಡದೇ ಬಳಸಿಕೊಳ್ಳುತ್ತೇವೆ ಎಂದು ಮನವರಿಕೆ ಮಾಡಿದ್ದಾರೆ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.