ರಾಯಚೂರು : ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ತಾಯಿ, ಮಗು ಮೃತಪಟ್ಟಿರುವ ಘಟನೆ ರಾಯಚೂರಿನ ಎಲ್ ಬಿಎಸ್ ನಗರದ ಬಳಿ ನಡೆದಿದೆ. ಶಾಖಾವಾದಿ ಗ್ರಾಮದ 30 ವರ್ಷದ ಈಶ್ವರಮ್ಮ, ಮೂರು ವರ್ಷದ ಮಗು ವನಿತಾ ಮೃತ ದುರ್ದೈವಿಗಳಾಗಿದ್ದಾರೆ.
ಈಶ್ವರಮ್ಮ ತನ್ನ ಮಗಳು ವನಿತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಅಣ್ಣನ ಮಗನೊಂದಿಗೆ ಬೈಕ್ ಮೇಲೆ ನಗರದ ಅಮೃತ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದಳು. ಈ ವೇಳೆ ಮಾರ್ಗಮಧ್ಯೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ತಾಯಿ,ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಸೂರ್ಯ ಪ್ರಕಾಶ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇನ್ನು ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರಾಯಚೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








