ಆಧುನಿಕ ಕ್ರಿಕೆಟ್ ನ ಆರಂಭಿಕ ರಣಬೇಟೆಗಾರರು.. ರೋಹಿತ್ ಗುಡುಗು- ವಿರಾಟ್ ಮಿಂಚು.. ರನ್ ಮಳೆ ಗ್ಯಾರಂಟಿ..?
ಗುಡುಗು -ಸಿಡಿಲು ಬಂದಾಗ ಮಳೆಯಾಗೋದು ಸಹಜ..ಹಾಗಂತ ಮಳೆ ಬೀಳಲೇಬೇಕು ಅಂತ ಏನಿಲ್ಲ. ಆದ್ರೆ ಗುಡುಗಿನ ಶಬ್ಧ, ಸಿಡಿಲಿನ ಕಿಡಿಗೆ ಬೆಚ್ಚಿಬೀಳಲೇಬೇಕು.. ಈ ಸನ್ನಿವೇಶಗಳು ಇಂಗ್ಲೆಂಡ್ ಮತ್ತು ಭಾರತ ತಂಡದ ನಡುವಿನ ಐದನೇ ಟಿ-ಟ್ವೆಂಟಿ ಪಂದ್ಯದಲ್ಲಿ ನಡೆದಿದ್ದವು.
ಹೌದು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಿದಾಗ ಗುಡುಗು -ಸಿಡಿಲು ಒಂದಾದಂತೆ ಭಾಸವಾಯ್ತು. ರೋಹಿತ್ ಶರ್ಮಾ ಆರಂಭದಲ್ಲೇ ಗುಡುಗಿದ್ರೆ, ವಿರಾಟ್ ಕೊಹ್ಲಿ ಸಿಡಿಲಿನಂತೆ ಇನಿಂಗ್ಸ್ ಕೊನೆಯ ತನಕ ಇಂಗ್ಲೀಷ್ ಬೌಲರ್ ಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದ್ರು.
ನಿಜ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಇದೊಂದು ರೀತಿಯಲ್ಲಿ ವಿಶ್ವ ಕ್ರಿಕೆಟ್ ಅನ್ನು ಅಚ್ಚರಿಯನ್ನುಂಟು ಮಾಡಿದ್ರೆ, ಕ್ರಿಕೆಟ್ ಅಭಿಮಾನಿಗಳು ಟಿ-ಟ್ವೆಂಟಿ ಕ್ರಿಕೆಟ್ ನ ರಸದೌತಣ ಪಕ್ಕಾ ಅಂದುಕೊಂಡಿದ್ದರು. ಅದನ್ನು ರೋಹಿತ್ ಮತ್ತು ವಿರಾಟ್ ಹುಸಿಗೊಳಿಸಲಿಲ್ಲ.
ಆದ್ರೆ ಇದೊಂದು ರೀತಿಯಲ್ಲಿ ವಿಭಿನ್ನ ಪ್ರಯೋಗ… ಟೀಮ್ ಇಂಡಿಯಾದ ಹೆಡ್ ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ನ ನಿರ್ಧಾರಕ್ಕೆ ಭೇಷ್ ಅನ್ನಲೇಬೇಕು.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಶಕಗಳಿಂದ ಜೊತೆಯಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಆದ್ರೆ ಇವರಿಬ್ಬರು ಯಾವತ್ತೂ ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸಿಲ್ಲ. (ನೆನಪಿಗೆ ಬರುತ್ತಿಲ್ಲ) ಆದ್ರೆ ಇಂಗ್ಲೆಂಡ್ ವಿರುದ್ಧದ ಐದನೇ ಟಿ=-ಟ್ವೆಂಟಿ ಪಂದ್ಯದಲ್ಲಿ ಇಂಥಹ ಒಂದು ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಯಾದ್ರೂ ಮುಂದಿನ ದಿನಗಳಲ್ಲಿ ಇವರಿಬ್ಬರು ಇನಿಂಗ್ಸ್ ಆರಂಭಿಸಿದ್ರೆ ಹೇಗೆ ಅನ್ನೋ ಕುತೂಹಲವಂತೂ ಇದ್ದೇ ಇದೆ.
ನಾಯಕ -ಉಪನಾಯಕನ ಜುಗುಲ್ ಬಂಧಿಗೆ ಕ್ರಿಕೆಟ್ ಜಗತ್ತು ಫಿಧಾ ಆಗಿಬಿಟ್ಟಿದೆ. ಯಾಕಂದ್ರೆ ಈ ಹಿಂದೆ ನಾವು ಜಯಸೂರ್ಯ – ಕಲುವಿತರಣ, ಸಚಿನ್ -ಗಂಗೂಲಿ, ಸಚಿನ್ -ಸೆಹ್ವಾಗ್, ಗಿಲ್ ಕ್ರಿಸ್ಟ್ – ಮ್ಯಾಥ್ಯೂ ಹೇಡನ್ ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಅಬ್ಬರದ ಆರಂಭದ ನೀಡಿದಂತ ಆರಂಭಿಕ ಆಟಗಾರರ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ನೋಡಿದ್ದೇವೆ. ಆಧುನಿಕ ಕ್ರಿಕೆಟ್ ನಲ್ಲಿ ತಡವಾಗಿ ಈಗ ರೋಹಿತ್ ಮತ್ತು ವಿರಾಟ್ ಕೊಹ್ಲಿಯ ಆರಂಭಿಕ ಜೊತೆಯಾಟದ ರಿಸರ್ಹಸಲ್ ಅನ್ನು ಗಮನಿಸಿದ್ದೇವೆ. ಇದೀಗ ಇದೇ ರಿಹರ್ಸಲ್ ವರ್ಕ್ ಔಟ್ ಆಗಿ ಮುಂದಿನ ದಿನಗಳಲ್ಲಿ ಇದೇ ಜೊತೆಯಾಟ ಟೀಮ್ ಇಂಡಿಯಾದಲ್ಲಿ ಮುಂದುವರಿದ್ರೆ ರನ್ ಮಳೆ ಪ್ರವಾಹದಂತೆ ಹರಿಯುವುದು ಖಚಿತ.
ಇಲ್ಲಿ ವಿರಾಟ್ ಕೊಹ್ಲಿ ಈ ರೀತಿಯ ನಿರ್ಧಾರ ಮಾಡುವುದಕ್ಕೂ ಒಂದು ಕಾರಣವಿದೆ. ಯಾಕಂದ್ರೆ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳ ಮೇಲಿರುವ ನಂಬಿಕೆ. ಸಾಮಾನ್ಯವಾಗಿ ವಿರಾಟ್ ಕೊಹ್ಲಿ ವನ್ ಡೌನ್ ಬ್ಯಾಟ್ಸ್ ಮೆನ್ ಆಗಿ ಕಣಕ್ಕಿಳಿಯುತ್ತಿದ್ದರು. ಈ ಸರಣಿಯ ಅಂತಿಮ ಪಂದ್ಯ ಬಿಟ್ಟು ಇನ್ನುಳಿದ ಪಂದ್ಯಗಳಲ್ಲಿ ಟು ಡೌನ್ ಆಗಿ ಕಣಕ್ಕಿಳಿದಿದ್ರು.
ಮುಖ್ಯವಾಗಿ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಪರಿಗೆ ನಾಯಕ ವಿರಾಟ್ ಕೊಹ್ಲಿಗೆ ಬೆರಗುಗೊಂಡಿದ್ದಾರೆ.
ಅಷ್ಟೇ ಅಲ್ಲ, ಇನಿಂಗ್ಸ್ ಆರಂಭದಿಂದಲೇ ತಾನು ಡಿಸೇಲ್ ಇಂಜಿನ್ ಥರಾ ಸ್ಲೋ ಸ್ಟಾರ್ಟ್ ಆದ್ರೂ ತನ್ನ ಉಳಿದ ಆಟಗಾರರು ಪೆಟ್ರೋಲ್ ಇಂಜಿನ್ ನಂತೆ ವೇಗವಾಗಿ ಬ್ಯಾಟ್ ಬೀಸಿದ್ರೆ ತಂಡದ ರನ್ ಗತಿ ಕಿಲೋ ಮೀಟರ್ ವೇಗದಲ್ಲಿ ಏರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭದಿಂದಲೇ ಡ್ರೈವರ್ ಸೀಟ್ ನಲ್ಲಿದ್ದುಕೊಂಡು ಟೀಮ್ ಇಂಡಿಯಾದ ಇನಿಂಗ್ಸ್ ಅನ್ನು ಗುರಿಮುಟ್ಟುವ ತನಕದ ಮುಗಿಸಬೇಕು ಅನ್ನೋ ಪ್ಲಾನ್ ಮೊದಲ ಪಂದ್ಯದಲ್ಲೇ ವರ್ಕ್ ಔಟ್ ಆಗಿದೆ.
ಈ ನಡುವೆ ಆಟದಲ್ಲಿ ಇಬ್ಬರ ಮೈಂಡ್ ಸೆಟ್ ಕೂಡ ಒಂದೇ ರೀತಿಯಾಗಿದೆ. ಮ್ಯಾಚ್ ಗೆಲ್ಲಬೇಕು.. ರನ್ ಗಳು ಹರಿದುಬರಬೇಕು. ಇನಿಂಗ್ಸ್ ನ ಕೊನೆಯ ತನಕ ಆಡಬೇಕು.. ಅಷ್ಟೇ ಅಲ್ಲ, ಇಬ್ಬರದ್ದು ನಾಯಕನ ಮನಸ್ಥಿತಿಯಲ್ಲೇ ಇರುವುದರಿಂದ ಇವರಿಬ್ಬರ ಕಾಂಬಿನೇಷನ್ ಕೂಡ ಅದ್ಭುತವಾಗಿಯೇ ಇದೆ.
ವಿರಾಟ್ ಕೊಹ್ಲಿಯ ನಿರ್ಧಾರ ಟಿ-ಟ್ವೆಂಟಿ ಪಂದ್ಯಕ್ಕೆ ಪಕ್ಕಾ ವರ್ಕ್ ಔಟ್ ಆಗುತ್ತೆ. ಆದ್ರೆ ಏಕದಿನ ಪಂದ್ಯಗಳಲ್ಲಿ ಸ್ವಲ್ಪ ಕಷ್ಟವಾದ್ರೂ ಆಗಬಹುದು. ಆದ್ರೂ ಲಘುವಾಗಿ ಪರಿಗಣಿಸುವಂತಿಲ್ಲ.
ಅದೇನೇ ಇರಲಿ, ಟೀಮ್ ಇಂಡಿಯಾ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಹುತೇಕ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ತಂಡವೇ ಆಡಿದ್ರೂ ಆಡಬಹುದು. ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಸೇರಿಕೊಳ್ಳಬಹುದು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗೋ ಸಾಧ್ಯತೆಗಳಿಲ್ಲ. ಹಾಗೇ ಬದಲಾವಣೆಯಾದ್ರೂ ಪೃಥ್ವಿ ಶಾ ತಂಡವನ್ನು ಸೇರಿಕೊಳ್ಳಬಹುದು.
ಒಟ್ಟಿನಲ್ಲಿ ಆಧುನಿಕ ಕ್ರಿಕೆಟ್ ನ ಕನಸಿನ ಆರಂಭಿಕ ಜೋಡಿಯಾಗಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಯನ್ನು ಹೆಚ್ಚಿಸಿದೆ. ಇವರಿಬ್ಬರು ಮುಂದಿನ ದಿನಗಳಲ್ಲೂ ಟಿ-ಟ್ವೆಂಟಿಯಲ್ಲೂ ಇನಿಂಗ್ಸ್ ಆರಂಭಿಸಲಿ ಎಂಬುದೇ ಅಭಿಮಾನಿಗಳ ಆಸೆಯೂ ಆಗಿದೆ.
#viratkohli #rohithsharma #teamindia #england #bcci #t-20cricket #ipl #t-20worldcup2021








