ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದ್ದು ಯಾಕೆ ? ಅಸಲಿ ಕಾರಣ ಏನು ?
ರೋಹಿತ್ ಶರ್ಮಾ… ವಿಶ್ವ ಕ್ರಿಕೆಟ್ ನ ಹಿಟ್ ಮ್ಯಾನ್. ಕ್ಲಾಸ್ ಮತ್ತು ಮಾಸ್ ಆಟದೊಂದಿಗೆ ವಿಶ್ವ ಕ್ರಿಕೆಟ್ ನಲ್ಲಿ ಪ್ರಜ್ವಲಿಸುತ್ತಿರುವ ರೋಹಿತ್ ಶರ್ಮಾ ತನ್ನದೇ ಆದ ಛಾಫು ಮೂಡಿಸಿದ್ದಾರೆ.
ಶತಕ ಹಾಗೂ ದ್ವಿಶತಕ, ಬೌಂಡರಿ -ಸಿಕ್ಸರ್ ಹೀಗೆ ಕ್ರಿಕೆಟ್ ಮೈದಾನದಲ್ಲಿ ರನ್ ಮೇಷಿನ್ ನಂತೆ ರನ್ ಗಳಿಸುವ ತಾಕತ್ತೂ ರೋಹಿತ್ ಶರ್ಮಾನಲ್ಲಿದೆ.
ಇನ್ನು ನಾಯಕನಾಗಿಯೂ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ಕೆಲವು ಸರಣಿಗಳಿಗೆ ರೋಹಿತ್ ಟೀಮ್ ಇಂಡಿಯಾವನ್ನು ಮುನ್ನಡೆಸಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಐಪಿಎಲ್ ನಲ್ಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಹಿರಿಮೆ ಕೂಡ ರೋಹಿತ್ ಹೆಸರಿನಲ್ಲಿದೆ. ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ರೋಹಿತ್ ನಾಯಕತ್ವದಲ್ಲಿ ಧೋನಿಯ ಛಾಯೆ ಇದೆ ಅಂತ ಹೇಳಲಾಗುತ್ತಿದೆ.
ಅದೇನೇ ಇರಲಿ, ಈಗ ರೋಹಿತ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿಸಿರುವುದರ ಬಗ್ಗೆ.
ಒಂದು ಮೂಲಗಳ ಪ್ರಕಾರ ರೋಹಿತ್ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಬಿಸಿಸಿಐ ರೋಹಿತ್ ಗಾಯದ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಅದರ ಜೊತೆಗೆ ಗಾಯಗೊಂಡಿರುವ ರೋಹಿತ್ ಮುಂಬೈ ಇಂಡಿಯನ್ಸ್ ನೆಟ್ಸ್ ನಲ್ಲಿ ತಾಲೀಮು ನಡೆಸುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಒಂದು ವೇಳೆ ರೋಹಿತ್ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡಿದ್ರೆ, ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಬಹುದು.
ಇನ್ನೊಂದೆಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಮುಸುಕಿನ ಗುದ್ದಾಟವೂ ಇದಕ್ಕೆ ಕಾರಣ ಅಂತ ಕೆಲವರು ಹೇಳುತ್ತಿದ್ದಾರೆ. ಹಾಗೇ ರೋಹಿತ್ ಬದಲು ಕರ್ನಾಟಕ ಆಟಗಾರರಿಗೆ ಅವಕಾಶ ಸಿಕ್ಕಿದೆ.. ಆಯ್ಕೆ ಸಮಿತಿಯ ಮುಖ್ಯಸ್ಥರು ಕರ್ನಾಟಕದವರೇ ಅಂತನೂ ಟೀಕೆಗಳು ಬರುತ್ತಿವೆ.
ಯಾರು ಏನೇ ಅಂದ್ರೂ ರೋಹಿತ್ ಶರ್ಮಾ ದೇಹವನ್ನು ಗಾಯ ಬೆಂಬಿಡದೇ ಕಾಡುತ್ತಿದೆ ಎಂಬುದು ಅಷ್ಟೇ ಸತ್ಯ.
ಹೌದು, ಕಳೆದ ಆರು ವರ್ಷಗಳಿಂದ ರೋಹಿತ್ ಶರ್ಮಾ ಗಾಯದಿಂದ ಬಳಲುತ್ತಿದ್ದಾರೆ. ತೊಡೆ ನೋವು, ಮಂಡಿ ನೋವು, ಪಾದ ನೋವು, ಮಂಡಿ ನೋವು, ಕೈ ಬೆರಳಿನ ಗಾಯ ಹೀಗೆ ಸತತವಾಗಿ ರೋಹಿತ್ ಶರ್ಮಾ ಅವರನ್ನು ಕಾಡುತ್ತಿದೆ.
ಅಲ್ಲದೆ ರೋಹಿತ್ ಈ ಗಾಯದಿಂದಲೇ ಹಲವಾರು ಸರಣಿಗಳಿಂದಲೂ ವಂಚಿತರಾಗಿದ್ದರು.
2014ರಲ್ಲಿ ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಸರಣಿಯಿಂದ ಹೊರಗುಳಿದಿದ್ದರು. ಈ ಗಾಯದಿಂದ ವಾಸಿಯೋಗೋಕೆ ಎರಡು ತಿಂಗಳು ಬೇಕಾಗಿತ್ತು.
2015ರಲ್ಲಿ ರೋಹಿತ್ ಶರ್ಮಾ ಅವರನ್ನು ಕಾಡಿದ್ದು ಮಂಡಿನೋವು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಂಡಿ ನೋವು ಕಾಣಿಸಿಕೊಂಡ ನಂತರ ಸರಣಿಯಿಂದ ಹೊರಗುಳಿದಿದ್ರು. ಬಳಿಕ ವಿಶ್ವಕಪ್ ಟೂರ್ನಿಯ ವೇಳೆ ತಂಡವನ್ನು ಮತ್ತೆ ಸೇರಿಕೊಂಡಿದ್ದರು.
2016ರಲ್ಲಿ ರೋಹಿತ್ ಶರ್ಮಾಗೆ ತೊಡೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಇದು ರೋಹಿತ್ ವೃತ್ತಿ ಬದುಕಿನ ಅತ್ಯಂತ ಗಂಭೀರ ಗಾಯವಾಗಿತ್ತು. ಇದು ನ್ಯೂಜಿಲೆಂಡ್ ಪ್ರವಾಸದ ವೇಳೆ ಕಾಣಿಸಿಕೊಂಡಿದ್ದ ನೋವು. ಶಸ್ತ್ರಚಿಕಿತ್ಸೆಯ ಬಳಿಕ ರೋಹಿತ್ ಅವರು 10-12 ವಾರಗಳ ಕಾಲ ತಂಡದಿಂದ ದೂರವೇ ಉಳಿದಿದ್ದರು. ಇದೇ ವೇಳೆ ರೋಹಿತ್ ಶರ್ಮಾ ಇಂಗ್ಲೆಂಡ್ ಸರಣಿಯಿಂದ ವಂಚಿತರಾಗಿದ್ದರು.
2016ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯ ವೇಳೆ ಪಾದದ ನೋವಿನಿಂದ ಬಳಲುತ್ತಿದ್ದರು. ಪಾಕ್ ವೇಗಿ ಮಹಮ್ಮದ್ ಅಮೀರ್ ಅವರ ಯಾರ್ಕರ್ ಎಸೆತವೊಂದು ರೋಹಿತ್ ಅವರ ಪಾದಕ್ಕೆ ಬಡಿದಿತ್ತು. ಹೀಗಾಗಿ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ರೂ ಟೂರ್ನಿಯಲ್ಲಿ ಆಡಿದ್ದರು.
2017ರಲ್ಲಿ ರೋಹಿತ್ ಶರ್ಮಾ ಮತ್ತೆ ಗಾಯದಿಂದ ಬಳಲಿದ್ದರು. ಈ ಬಾರಿ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತ್ತು. ಈ ವೇಳೆ ರೋಹಿತ್ ಶರ್ಮಾ ಅವರು ದೇಶಿ ಪಂದ್ಯಗಳಾದ ದೇವಧರ್ ಟ್ರೋಫಿಯಿಂದ ಹೊರಗುಳಿದಿದ್ದರು.
2019ರ ವಿಶ್ವಕಪ್ ವೇಳೆಯಲ್ಲೂ ರೋಹಿತ್ ಶರ್ಮಾ ಅವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಆದ್ರೆ ಬೇಗನೇ ಚೇತರಿಸಿಕೊಂಡು ವಿಶ್ವಕಪ್ ಟೂರ್ನಿಯಲ್ಲಿ ಶತಕದ ಮೇಲೆ ಶತಕ ದಾಖಲಿಸಿ ಮಿಂಚು ಹರಿಸಿದ್ದರು.
2020 ಐಪಿಎಲ್ ಟೂರ್ನಿಯಲ್ಲೂ ರೋಹಿತ್ ಶರ್ಮಾ ಅವರನ್ನು ಮಂಡಿ ನೋವು ಕಾಣಿಸಿಕೊಂಡಿದೆ. ಈಗಾಗಲೇ ಟೂರ್ನಿಯ ಎರಡು ಪಂದ್ಯಗಳಲ್ಲಿ ಆಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿದೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ಅವರನ್ನು ಮಂಡಿನೋವು, ತೊಡೆ ನೋವು, ಪಾದ ನೋವು, ಮೊಣಕಾಲು ನೋವು ಕಾಡುತ್ತಲೇ ಬಂದಿದೆ.








