ಜಡೇಜಾ ದ್ವಿ ಶತಕ ತಪ್ಪಿಸಿದ ರೋಹಿತ್ ನಡೆಗೆ ನೆಟ್ಟಿಗರಿಂದ ಟ್ರೋಲ್….
ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ರೋಹಿತ್ ಶರ್ಮಾ ನಡೆದುಕೊಂಡ ರೀತಿಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ ಮೊದಲ ಇನ್ನಿಂಗ್ಸ್ 574/8 ಸ್ಕೋರ್‌ಗೆ ಡಿಕ್ಲೇರ್ ಮಾಡಿಕೊಂಡರು.
ರೋಹಿತ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದಾಗ ರವೀಂದ್ರ ಜಡೇಜಾ ಅಜೇಯ 175 ರನ್ ಗಳಿಸಿದ್ದರು. ಮೊಹಮ್ಮದ್ ಶಮಿ ಅವರೊಂದಿಗೆ 9ನೇ ವಿಕೆಟ್‌ಗೆ 94 ಎಸೆತಗಳಲ್ಲಿ ಅಜೇಯ 103 ರನ್ ಜೊತೆಯಾಟ ಡಿದ್ದರು. ಜಡೇಜಾ ಅವರು ಇದ್ದ ಲಯಕ್ಕೆ 20 ರಿಂದ 25 ನಿಮಿಷಗಳನ್ನ ನೀಡಿದ್ದರೆ, ಅವರು ದ್ವಿಶತಕ ಗಳಿಸುವ ಅವಕಾಶ ದೊರಕುತಿತ್ತು…
ಇದೀಗ ರೋಹಿತ್ ಶರ್ಮಾ ಅವರ ಈ ನಿರ್ಧಾರದ ಬಗ್ಗೆ ಪ್ರಶ್ನೆಗಳು ತಕರಾರುಗಳು ಎದ್ದಿವೆ. 18 ವರ್ಷಗಳ ಹಿಂದೆ 2004 ರ ಟೆಸ್ಟ್ ನಲ್ಲಿ 194 ರನ್‌ಗಳಿಸಿ ಆಡುತ್ತಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ರಾಹುಲ್ ದ್ರಾವಿಡ್ ಅವರು ಮರಳಿ ಕರೆದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ.
2004ರಲ್ಲಿ ಭಾರತ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ, ಪ್ರಸ್ತುತ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರ ತ್ರಿಶತಕದಿಂದಾಗಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ.
ಸಚಿನ್ ಸಹ ಅದ್ಭುತವಾಗಿ ಬ್ಯಾಟಿಂಗ್ ಮಾಡುವಾಗ 194 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು, ಆದರೆ ದ್ರಾವಿಡ್‌ನಿಂದಾಗಿ ಸಚಿನ್ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಸಚಿನ್ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುವಾಗ, ರಾಹುಲ್ ದ್ರಾವಿಡ್ ಅವರ ನಿರ್ಧಾರಕ್ಕೆ ಅಸಹನೆ ವ್ಯಕ್ತಪಡಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ದ್ರಾವಿಡ್ ಮತ್ತು ರೋಹಿತ್ ಅವರನ್ನ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ 228 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ 150 ರನ್‌ಗಳ ಗಡಿ ದಾಟಿದ್ದರು.
ಇದು ಜಡೇಜಾ ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ 11 ನೇ ಶತಕವಾಗಿದೆ. ಇದಕ್ಕೂ ಮುನ್ನ ಸರ್ ಜಡೇಜಾ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 100 ರನ್ ಗಳಿಸಿದ್ದರು. ಶತಕ ಬಾರಿಸಿದ ಜಡೇಜಾ ತಮ್ಮದೇ ಶೈಲಿಯಲ್ಲಿ ಕತ್ತಿವರಸೆಯ ಮೂಲಕ ಶತಕವನ್ನ ಸಂಭ್ರಮಿಸಿದ್ದಾರೆ.








