ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಬೆನ್ನಲ್ಲೇ ಮತ್ತೊಬ್ಬ ರೌಡಿ ಪನ್ನಾ ಯಾದವ್ ಎನ್ ಕೌಂಟರ್ ಗೆ ಬಲಿ
ಗೋರಖಪುರ, ಜುಲೈ 11: ಉತ್ತರ ಪ್ರದೇಶದಲ್ಲಿ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿಯಾದ ಬೆನ್ನಲ್ಲೇ ಮತ್ತೋರ್ವ ರೌಡಿ ಶೀಟರ್ ಪನ್ನಾ ಯಾದವ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಎನ್ ಕೌಂಟರ್ ನಿಂದ ತೀವ್ರವಾಗಿ ಗಾಯಗೊಂಡಿದ್ದ ರೌಡಿ ಪನ್ನಾ ಯಾದವ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ. ಬಹ್ರೈಚ್ ಜಿಲ್ಲೆಯ ಹದ್ರಿಯ, ಅಹಿರಾನಪುರ್ವ ಗ್ರಾಮದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ನಡೆಸಿದ ಎನ್ ಕೌಂಟರ್ ನಲ್ಲಿ ರೌಡಿ ಪನ್ನಾ ಯಾದವ್ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಆತ ಮೃತಪಟ್ಟಿದ್ದ.
ಗೋರಖಪುರದ ನಿವಾಸಿಯಾಗಿದ್ದ ಪನ್ನಾ ಯಾದವ್ ಬಗ್ಗೆ ಸುಳಿವು ನೀಡಿದವರಿಗೆ, ಐವತ್ತು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಈ ಮೊದಲು ಘೋಷಣೆಯಾಗಿತ್ತು ಎಂದು ಎಸ್ಪಿ ವಿಪಿನ್ ಮಿಶ್ರಾ ಹೇಳಿದ್ದಾರೆ.
ಪನ್ನಾ ಯಾದವ್ ದರೋಡೆ, ಲೂಟಿ ಮತ್ತು ಸುಲಿಗೆ ಸೇರಿದಂತೆ, ಸುಮಾರು 36 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದ. ಉತ್ತರ ಪ್ರದೇಶದ ಅಜಂಗರ್, ಗೋರಖಪುರ, ಖೇರಿ, ಬಸ್ತಿ, ಮತ್ತು ಮಹಾರಾಜ್ ಗಂಜ್ ನಲ್ಲಿ ಆತ ತನ್ನ ಕಾರ್ಯಚರಣೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಪೊಲೀಸರ ಎನ್ ಕೌಂಟರ್ ಗೆ ಹತ್ಯೆಯಾದ ಬೆನ್ನಲ್ಲೇ ಮತ್ತೊಬ್ಬ ರೌಡಿ ಶೀಟರ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಉತ್ತರ ಪ್ರದೇಶವನ್ನು ಅಪರಾಧದ ಜಗತ್ತನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾರೆ. ವಿಕಾಸ್ ದುಬೆ ಎನ್ ಕೌಂಟರ್ ಗೆ ಅವನ ಹುಟ್ಟೂರಾದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಜನರು ಸಿಹಿಹಂಚಿ ಸಂಭ್ರಮಿಸಿದರು.