gaming app scam: ಗೇಮ್ ಆಪ್ ಮೂಲಕ ವಂಚನೆ – ED ದಾಳಿಯಲ್ಲಿ 17 ಕೋಟಿ ವಶಕ್ಕೆ..
ಕೋಲ್ಕತ್ತಾದ ಆರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು, ಸುಮಾರು 17 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ಮೊಬೈಲ್ ಗೇಮಿಂಗ್ ಆಪ್ ಮೂಲಕ ವಂಚನೆ ಪ್ರಕರಣದ ಭಾಗವಾಗಿ ತನಿಖೆ ನಡೆಸಲಾಗುತ್ತಿದೆ.
ಇಡಿ ಅಧಿಕಾರಿಗಳ ತಂಡ, ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಉದ್ಯಮಿ ಅಮೀರ್ ಖಾನ್ ಅವರ ಆವರಣದ ಮೇಲೆ ದಾಳಿ ನಡೆಸಿತು. ಇಲ್ಲಿಯವರೆಗೆ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ.
ದಾಳಿ ಮುಂದುವರೆದಿದ್ದು, ವಶಪಡಿಸಿಕೊಂಡಿರುವ ಹಣದ ನಿಖರವಾದ ಮೊತ್ತವನ್ನು ಖಚಿತಪಡಿಸಿಕೊಳ್ಳಲು ಹಣ ಎಣಿಕೆ ಯಂತ್ರಗಳನ್ನು ತರಲಾಗಿದೆ. ವಶಪಡಿಸಿಕೊಂಡ ಹಣವನ್ನು ಸಾಗಿಸಲು ಹಲವಾರು ಟ್ರಂಕ್ಗಳು ಉದ್ಯಮಿಯ ನಿವಾಸಕ್ಕೆ ಬಂದಿವೆ. ಉದ್ಯಮಿಯ ನಿವಾಸದ ಮೇಲೆ ಇಡಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳನ್ನು ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
E-Nuggets ಎಂಬ ಮೊಬೈಲ್ ಗೇಮಿಂಗ್ ಆಪ್ ಬಳಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.