ಪ್ರಮುಖ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಡೇವಿಡ್ ಮಿಲ್ಲರ್(101) ಹಾಗೂ ಹೆನ್ರಿಚ್ ಕ್ಲಾಸೆನ್(47) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಏಕದಿನ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ 212 ರನ್‌ಗಳಿಸಿದೆ.
ಕೊಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ ಪ್ರಮುಖ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ಸೌತ್ ಆಫ್ರಿಕಾ, ಡೇವಿಡ್ ಮಿಲ್ಲರ್(101 ರನ್, 116 ಬಾಲ್, 8 ಬೌಂಡರಿ, 5 ಸಿಕ್ಸ್) ಹಾಗೂ ಹೆನ್ರಿಚ್ ಕ್ಲಾಸೆನ್(47 ರನ್, 48 ಬಾಲ್, 4 ಬೌಂಡರಿ, 2 ಸಿಕ್ಸ್) ಅವರುಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 49.4 ಓವರ್‌ಗಳಲ್ಲಿ 212 ರನ್‌ಗಳಿಗೆ ಸರ್ವಪತನ ಕಂಡಿದೆ.
ಆಸೀಸ್ ಬೌಲಿಂಗ್ ಪ್ರಾಬಲ್ಯ:
ಮೊದಲು ಬ್ಯಾಟಿಂಗ್ ಆರಂಭಿಸಿದ ಸೌತ್ ಆಫ್ರಿಕಾ, ಇನ್ನಿಂಗ್ಸ್‌ನ ಮೊದಲ ಓವರ್‌ನಿಂದಲೇ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ಸಿಲುಕಿತು. ಮೊದಲ ಓವರ್‌ನಲ್ಲೇ ನಾಯಕ ತೆಂಬಾ ಬವುಮಾ(0) ಪೆವಿಲಿಯನ್ ಸೇರಿಕೊಂಡರೆ. ಇವರ ಬೆನ್ನಲ್ಲೇ ಕ್ವಿಂಟನ್ ಡಿಕಾಕ್(3) ಕೂಡ ತಮ್ಮ ವಿಕೆಟ್ ಕೈಚಲ್ಲಿದರು. ಇಬ್ಬರು ಆರಂಭಿಕರ ವಿಕೆಟ್ ಪತನದ ಬಳಿಕ ಬಂದ ದುಸೇನ್(6) ಮತ್ತು ಐಡೆನ್ ಮಾರ್ಕ್ರಂ(10) ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಇದರ ಪರಿಣಾಮ ಸೌತ್ ಆಫ್ರಿಕಾ 11.5 ಓವರ್‌ಗಳಲ್ಲಿ 24 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಮಿಲ್ಲರ್ ಶತಕದ ಆಸರೆ:
ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯಕ್ಕೆ ಸಿಲುಕಿದ ಸೌತ್ ಆಫ್ರಿಕಾಕ್ಕೆ ಅನುಭವಿ ಡೇವಿಡ್ ಮಿಲ್ಲರ್(101 ರನ್, 116 ಬಾಲ್, 8 ಬೌಂಡರಿ, 5 ಸಿಕ್ಸ್) ಆಸರೆಯಾದರು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಮಿಲ್ಲರ್, ಭರ್ಜರಿ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹೆನ್ರಿಚ್ ಕ್ಲಾಸೆನ್(47 ರನ್, 48 ಬಾಲ್, 4 ಬೌಂಡರಿ, 2 ಸಿಕ್ಸ್) ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಕೈಚಲ್ಲಿದರು. ಆಸೀಸ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಿಲ್ಲರ್ ಹಾಗೂ ಕ್ಲಾಸೆನ್ 5ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವಾಡಿದರು.
ಕೆಳ ಕ್ರಮಾಂಕದಲ್ಲಿ ಬಂದ ಕಾಟ್ಸಿಯಾ(19), ಮಹಾರಾಜ್(4), ರಬಾಡ(10) ಹಾಗೂ ಶಮ್ಸಿ(1*) ರನ್‌ಗಳಿಸಲಷ್ಟೇ ಶಕ್ತರಾದರು. ಪರಿಣಾಮ ಸೌತ್ ಆಫ್ರಿಕಾ 49.4 ಓವರ್‌ಗಳಲ್ಲಿ 212 ರನ್‌ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾದ ಪರ ವೇಗಿ ಮಿಚೆಲ್ ಸ್ಟಾರ್ಕ್(3/34), ಪ್ಯಾಟ್ ಕಮ್ಮಿನ್ಸ್(3/51), ಹೇಜಲ್ವುಡ್(2/12) ಹಾಗೂ ಟ್ರಾವಿಸ್ ಹೆಡ್(2/21) ಉತ್ತಮ ಬೌಲಿಂಗ್ ಮೂಲಕ ಸೌತ್ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
RSA v AUS, Australia, South Africa, David Miller, World Cup