ಸೆಂಚೂರಿಯನ್ ನಲ್ಲಿ ಟೀಂ ಇಂಡಿಯಾಗೆ ಐತಿಹಾಸಿಕ ಜಯ
ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ ಮತ್ತು ಬೌಲರ್ ಗಳ ಸಂಘಟಿತ ಪ್ರದರ್ಶನದಿಂದ ಭಾರತ ಆಫ್ರಿಕಾ ವಿರುದ್ಧ 113 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕನ್ನಡಿಗಾರ ಕೆ.ಎಲ್.ರಾಹುಲ್ ಮತ್ತು ಮಯಾಂಕ್ ಭದ್ರ ಬುನಾದಿ ಹಾಕಿದರು. ಮಯಾಂಕ್ ಅರ್ಧಶತಕ, ರಾಹುಲ್ ಶತಕದ ನೆರವಿನಿಂದ ಭಾರತ ತಂಡ 327 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವನ್ನು 197ಕ್ಕೆ ಕಟ್ಟಿಹಾಕಿತ್ತು. 130 ರನ್ ಗಳ ಲೀಡ್ ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 174 ರನ್ಗಳಿಗೆ ಸರ್ವ ಪತನ ಕಂಡಿತು. ಆ ಮೂಲಕ ಹರಿಣಗಳಿಗೆ 305 ರನ್ಗಳ ಕಠಿಣ ಗುರಿ ನೀಡಿತ್ತು.
305 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 5ನೇ ದಿನ 191 ರನ್ಗಳಿಗೆ ಆಲೌಟ್ ಆಗುವ ಮೂಲಕ ತವರಿನಲ್ಲೇ 113 ರನ್ಗಳ ಹೀನಾಯ ಸೋಲು ಕಂಡಿದೆ. ಇದು ಭಾರತಕ್ಕೆ ಸೆಂಚುರಿಯನ್ನಲ್ಲಿ ಮೊದಲ ಜಯವಾದರೆ, ವಿರಾಟ್ ಕೊಹ್ಲಿ ಹರಿಣಗಳ ನಾಡಿನಲ್ಲಿ 2 ಪಂದ್ಯ ಗೆದ್ದ ಏಕೈಕ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಜವಾಬ್ದಾಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆ.ಎಲ್ ರಾಹುಲ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸಿದ್ದರು.
ಇತ್ತ ಭಾರತದ ಆಫ್ರಿಕಾ ವಿರುದ್ಧ ಗೆಲ್ಲಲು ಮತ್ತೊಂದು ಪ್ರಮುಖ ಕಾರಣ, ಫಾಸ್ಟ್ ಬೌಲರ್ ಗಳ ಆಕ್ರಮಣಕಾರಿ ದಾಳಿ. ಪಂದ್ಯದಲ್ಲಿ ಬಿಟ್ಟು ಬಿಡದಂತೆ ಆಫ್ರಿಕಾ ಬ್ಯಾಟರ್ ಗಳನ್ನು ಮೊಹಮ್ಮದ್ ಶಮಿ. ಬುಮ್ರಾ, ಸಿರಾಜ್ ಕಾಡಿದರು.
ಶಮಿ ಈ ಪಂದ್ಯದಲ್ಲಿ 8 ವಿಕೆಟ್, ಬುಮ್ರಾ 5 ವಿಕೆಟ್, ಸಿರಾಜ್ 3 ವಿಕೆಟ್, ಶರ್ದೂಲ್, ಅಶ್ವಿನ್ ತಲಾ 2 ವಿಕೆಟ್ ಪಡೆದಿದ್ದಾರೆ.