ರಷ್ಯಾ-ಉಕ್ರೇನ್ ಯುದ್ಧ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ : ಟಿ.ಎಸ್. ತಿರುಮೂರ್ತಿ Saaksha Tv
ನವದೆಹಲಿ: ಕಳೆದ ೧೧ ದಿನಗಳಲ್ಲಿ ಅಂದಾಜು ೧.೫ ಮಿಲಿಯನ್ ನಿರಾಶ್ರಿತರು ಉಕ್ರೇನ್‌ನ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದ್ದು ಇದನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ ಎಂದು ಭಾರತ ಹೇಳಿದೆ.
ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕರೆದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಮಾನವೀಯ ಬಿಕ್ಕಟ್ಟಿನತ್ತ ತುರ್ತು ಗಮನ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ನಿರಂತರ ಶೆಲ್ ದಾಳಿಯಿಂದಾಗಿ ಸುಮಿಯಲ್ಲಿ ಭಾರತೀಯರು ಸಿಲುಕಿಹಾಕಿಕೊಂಡಿದ್ದು, ಇವರಲ್ಲಿ ಹೆಚ್ಚಿನವರು ಸುಮಿ ಸ್ಟೇಟ್ ಯೂನಿರ್ಸಿಟಿಯ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಇವರನ್ನು ಅಲ್ಲಿಂದ ಸ್ಥಳಾಂತರಿಸಲು ಪ್ರಯತ್ನಗಳು ನಡೆದಿದ್ದು, ಅದು ವಿಫಲವಾಗಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಮತ್ತೊಮ್ಮೆ ರಷ್ಯಾ ಮತ್ತು ಉಕ್ರೇನ್ ಕಡೆಯ ನಾಯಕರೊಂದಿಗೆ ಮಾತನಾಡಿದ್ದು, ತಕ್ಷಣವೇ ಕದನ ವಿರಾಮಕ್ಕಾಗಿ ಭಾರತದ ಕರೆಯನ್ನು ಪುನರುಚ್ಚರಿಸಿದರು ಮತ್ತು ಎರಡೂ ಪಕ್ಷಗಳು ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ. ಉಕ್ರೇನ್‌ನಲ್ಲಿ ಉಳಿದಿರುವ ಭಾರತೀಯ ಪ್ರಜೆಗಳು ಸೇರಿದಂತೆ ಎಲ್ಲಾ ನಾಗರಿಕರಿಗೆ ಸುರಕ್ಷಿತ ಮತ್ತು ತಡೆರಹಿತ ಸ್ಥಳಾಂತರಕ್ಕೆ ಮಾರ್ಗದ ತುರ್ತು ಬೇಡಿಕೆಯನ್ನು ಭಾರತ ಪುನರುಚ್ಚರಿಸಿದೆ ಎಂದು ತಿರುಮುರ್ತಿ ಹೇಳಿದ್ದಾರೆ.
ಎರಡು ಕಡೆಯವರಿಗೆ ಪದೇ ಪದೇ ಒತ್ತಾಯಿಸಿದರೂ ಸುಮಿಯಲ್ಲಿ ಸಿಲುಕಿರುವ ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ಸಾಕಾರ ಆಗದೇ ಇರುವುದರ ಬಗ್ಗೆ ಭಾರತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಕಳೆದ ಕೆಲವು ದಿನಗಳಲ್ಲಿ ೨೦,೦೦೦ ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಹಿಂದಿರುಗಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ತಿರುಮರ್ತಿ ಅವರು ಉಕ್ರೇನ್ ಮತ್ತು ಅದರ ನೆರೆಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದರು.








