ರಷ್ಯಾ-ಉಕ್ರೇನ್ ಯುದ್ಧ | ಏರಿಕೆಯಾದ ಭಾರತದ ರಫ್ತು ಪ್ರಮಾಣ
ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು ಪ್ರಮಾಣ ಶೇಕಡಾ 24.2 ರಷ್ಟು ಏರಿಕೆಯಾಗುವ ಮೂಲಕ ದಾಖಲೆ ಬರೆದಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಡೀ ಜಗತ್ತು ಆರ್ಥಿಕ ಹಿಂಜರಿತದ ಪರಿಣಾಮಗಳಿಂದ ತತ್ತರಿಸುತ್ತಿದೆ. ಆದರೆ ಈ ನಡುವೆಯೇ ಭಾರತವು ರಫ್ತು ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆಯಲ್ಲಿ ದಾಖಲೆ ಬರೆದಿದ್ದು, ಜಗತ್ತನ್ನೇ ನಿಬ್ಬೆರಗಿಸುವಂತಾಗಿದೆ.
ಇನ್ನೂ ಈ ರಪ್ತನ್ನು ಡಾಲರ್ ರೂಪದಲ್ಲಿ ಲೆಕ್ಕಹಾಕುವುದಾದರೆ 38.2 ಶತಕೋಟಿ ಡಾಲರ್ ಮೊತ್ತದಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು ಶೇ. 113.2, ಎಲೆಕ್ಟ್ರಾನಿಕ್ ವಸ್ತುಗಳು ಶೇ.64, ಮತ್ತು ರಾಸಾಯನಿಕ ವಸ್ತುಗಳ ಶೇ 26.7 ರಫ್ತು ಪ್ರಮಾಣ ಏರಿಕೆಯಾಗಿದೆ. ಇನ್ನೂ ಎಂಜಿನಿಯರಿಂಗ್ ಸರಕುಗಳು ಶೇ 15.4, ಫಾರ್ಮಾಸ್ಯುಟಿಕಲ್ಸ್ ಶೇ 3.9, ಮತ್ತು ಸಿದ್ಧ ಉಡುಪುಗಳು ಶೇ. 16.4 ಬೆಳವಣಿಗೆ ದಾಖಲಿಸಿದೆ.
ಮತ್ತೊಂದೆಡೆ, ರತ್ನಗಳು ಮತ್ತು ಆಭರಣಗಳ ರಫ್ತು ಶೇ. 2.1 ಮತ್ತು ಅಕ್ಕಿ ಶೇ. 14.2 ರಫ್ತು ಪ್ರಮಾಣ ಏಪ್ರಿಲ್ ನಲ್ಲಿ ಕೊಂಚ ಹಿನ್ನಡೆ ಕಂಡಿದೆ. ಹಾಗೇ ದೇಶದ ಚಿನ್ನದ ಆಮದು ಪ್ರಮಾಣ 1.7 ಶತಕೋಟಿ ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್ ನಲ್ಲಿ ಅಮದು ಪ್ರಮಾಣ 6.23 ಶತಕೋಟಿ ಡಾಲರ್ ಗಳಷ್ಟಿತ್ತು.